ರಾಜಧಾನಿಯಲ್ಲಿ ರಾಹುಲ್ ಗಾಂಧಿ: ಕೈ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ

ಬೆಂಗಳೂರು:ಮೇ-9: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರ ಮತ ಬೇಟೆ ಕೂಡ ಜೋರಾಗಿ ಸಾಗಿದೆ. ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಮಠ ಮಂದಿರ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿದ್ದಾರೆ.

ಎಲ್ಲಾ ವರ್ಗದ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ, ಇದೀಗ ಬೆಂಗಳೂರಿನಲ್ಲಿಯೂ ಟೆಂಪಲ್ ರನ್ ಮೂಲಕ ಸರ್ವಧರ್ಮೀಯರ ಮತ ಸೆಳೆಯುವ ತಂತ್ರದ ಮೊರೆ ಹೋಗಿದ್ದಾರೆ. ಕಳೆದ ರಾತ್ರಿ ಚರ್ಚ್‌ಗೆ ತೆರಳಿ ಆರ್ಚ್ ಬಿಷಪ್ ಬರ್ನಾಡ್ ಮೊರೆಸ್ ಅವರನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ, ಇಂದು ಬೆಳಗ್ಗೆ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯಕ್ಕೆ ತೆರಳಿ ಗಣಪತಿ ದರ್ಶನ ಮಾಡಿದರು.

ನಂತರ ಚಿಕ್ಕಪೇಟೆಯ ಹಜರತ್ ತೌಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಮೂರೂ ಪ್ರಮುಖ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಮೂರೂ ಧರ್ಮದ ಮತದಾರರ ಸೆಳೆಯುವ ಕಸರತ್ತು ನಡೆಸಿದ್ದಾರೆ.

ಈ ಮಧ್ಯೆ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಈ ವೇಳೆ ತಮ್ಮ ನೋವುಗಳನ್ನು ರಾಹುಲ್ ಮುಂದೆ ಮಹಿಳಾ ಗಾರ್ಮೆಂಟ್ ಉದ್ಯೋಗಿಗಳು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಗಾರ್ಮೆಂಟ್ ಉದ್ಯಮ ಹಾಗೂ ಮಹಿಳಾ ಉದ್ಯೋಗಿಗಳ ಸಂಬಳ, ಬದುಕು ನಿರ್ವಹಣೆ ಬಗ್ಗೆ ರಾಹುಲ್ ಚರ್ಚೆ ನಡೆಸಿದ್ದು, ಕಾಂಗ್ರೆಸ್ ಗೆ ಬೆಂಬಲ ನೀಡಿ ಮತಹಾಕಿ, ನಿಮ್ಮ ಪರ ನಮ್ಮ ಸರ್ಕಾರ ಸಾದಾ ಇರುತ್ತದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ