ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ; ಈಗ ಕರ್ನಾಟಕದ ಜನತೆ ಕಾಂಗ್ರೆಸ್ ನ್ನು ಮನೆಗೆ ಕಳುಹಿಸಲಿದ್ದಾರೆ: ಪ್ರಧಾನಿ ಮೋದಿ

ಬಂಗಾರಪೇಟೆ: ಮೇ-9:ಕಾಂಗ್ರೆಸ್ ಸಂಸ್ಕೃತಿ, ಅವರ ಧೋರಣೆ, ಅವರ ಸಚಿವರ ಬಗ್ಗೆ ದೇಶದ ಜನತೆಗೆ ಗೊತ್ತಿದೆ. ಹಾಗಾಗಿಯೇ ಜನರು ದೇಶಾದ್ಯಂತ ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಈಗ ಕರ್ನಾಟಕದ ಸರದಿ ಬಂದಿದ್ದು, ಈ ಬಾರಿ ಚುನಾವಣೆಯಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್ ಗೆ ವಿದಾಯ ಹೇಳುವುದು ನಿಚಿತ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಂಗಾರಪೇಟೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಈಗಾಗಲೇ ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿದೆ. ಈಗ ಕರ್ನಾಟಕದ ಸರದಿ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ್ಯದ ಜನತೆ ಕಾಂಗ್ರೆಸ್ ನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು.

ದೇಶದಲ್ಲಿದ್ದ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಜನರು ಸಿಟ್ಟುಗೊಂಡಿದ್ದಾರೆ. ಕರ್ನಾಟಕಕ್ಕೆ ದೇಶದಲ್ಲಿ ವಿಶೇಷ ಸ್ಥಾನವಿದೆ. ಬೆಂಗಳೂರು, ಮೈಸೂರು, ಕೋಲಾರ, ಮಂಗಳೂರು ಮತ್ತಿತರ ಪ್ರದೇಶಗಳ ಬಗ್ಗೆ ದೇಶಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದಲ್ಲಿ ರಾಜ್ಯವನ್ನು ಹಾಳು ಮಾಡಿದೆ. ಕೋಮುವಾದ, ಜಾತಿವಾದ, ಭ್ರಷ್ಟಾಚಾರ, ಅಪರಾಧ ಕೃತ್ಯ, ಗುತ್ತಿಗೆ ವ್ಯವಸ್ಥೆಗಳಿಂದಾಗಿ ಕಾಂಗ್ರೆಸ್ ಸಂವಿಧಾನದ ರೀತಿ ನೀತಿಗಳನ್ನೇ ಹಾಳುಮಾಡಿದೆ, ಇವೆಲ್ಲವೂ ಕರ್ನಾಟಕದ ಭವಿಷ್ಯವನ್ನೇ ಹಾಳು ಮಾಡುತ್ತಿದೆ ಎಂದರು.

ಎಲ್ಲ ಪ್ರದೇಶಗಳಲ್ಲಿ ಕಾಂಗ್ರೆಸ್​ ಕಪ್ಪ ಕಾಣಿಕೆ ಕೊಡುವ ಗುಲಾಮರನ್ನು ಇಟ್ಟುಕೊಂಡಿದೆ. ಕಾಂಗ್ರೆಸ್​ಗೆ ಕೆಲಸ ಮಾಡುವುದು ಗೊತ್ತಿಲ್ಲ. ಮನಮೋಹನ್​ ಸಿಂಗ್​ ರಿಮೋಟ್​ ಕಂಟ್ರೋಲ್​ ಪಿಎಂ ಆಗಿದ್ದರು. ಸೋನಿಯಾಗಾಂಧಿ ಜನ್​ಪತ್​ನಲ್ಲಿ ರಿಮೋಟ್​ ಇತ್ತು. ಆದರೆ, ಮೋದಿ ಸರ್ಕಾರಕ್ಕೆ 125 ಕೋಟಿ ಜನರೇ ರಿಮೋಟ್​ ಕಂಟ್ರೋಲ್​ ಆಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಹೈಕಮಾಂಡ್​ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಚಿನ್ನದ ಚಮಚದೊಂದಿಗೆ ಹುಟ್ಟಿದೆ. ದೇಶದ ಬಡವರ ಯಾತನೆಗಳು ಅವರಿಗೆ ಅರ್ಥವಾಗುವುದಿಲ್ಲ. ನಾನು ದೇಶದಲ್ಲಿ ಶೌಚಾಲಯ ನಿರ್ಮಿಸಿದರೆ, ನಾನು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಆರೋಪಿಸುತ್ತಿದ್ದಾರೆ.

ಹಲವಾರು ವರ್ಷ ಅನುಭವಸ್ಥರು ಇಲ್ಲಿರುವಾಗ ತನಗೆ ಪ್ರಧಾನಿ ಸ್ಥಾನ ಸಿಗಬೇಕೆಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ನಾನೇ ಪ್ರಧಾನಿ ಎಂದು ಅವರೇ ಘೋಷಿಸಿಕೊಳ್ಳುವುದು ಹೇಗೆ? ಇದು ಅಹಂಕಾರ ಅಲ್ಲದೆ ಮತ್ತೇನು? ಈ ರೀತಿ ಅಪ್ರಬುದ್ಧರಾಗಿರುವವರನ್ನು ದೇಶದ ಜನರು ಸ್ವೀಕರಿಸುತ್ತಾರೆಯೇ? ಮೋದಿಯನ್ನು ಸೋಲಿಸುವುದಕ್ಕಾಗಿ ದೊಡ್ಡ ದೊಡ್ಡ ಸಭೆಗಳನ್ನು ಆಯೋಜಿಸಲಾಗುತ್ತಿದೆ, ಈ ಸಭೆಯಲ್ಲಿ ದಿಢೀರನೆ ಪ್ರಧಾನಿ ಸ್ಥಾನಕ್ಕೆ ರಾಹುಲ್ ಹೆಸರನ್ನು ಸೂಚಿಸಿದಾಗ ಅಲ್ಲಿದ್ದವರ ಪ್ರತಿಕ್ರಿಯೆ ಹೇಗಿರಬಹುದು? ಎಂದು ಪ್ರೆಶ್ನಿಸಿದರು.

ಇಲ್ಲಿ ಹಲವಾರು ಪಕ್ಷಗಳು, ಮೈತ್ರಿ ಪಕ್ಷಗಳು, ರಾಜಕಾರಣಿಗಳು ಸರದಿ ಸಾಲಿನಲ್ಲಿದ್ದಾರೆ. ಹೀಗಿರುವಾಗ ರಾಹುಲ್ ಗಾಂಧಿ ತಮ್ಮ ಗುರಿಯನ್ನು ಹೇಳಿಕೊಂಡಿದ್ದಾರೆ. ಇದು ನಾಮ್‍ಧಾರ್‍‍ಗಳ ಜಂಭವನ್ನು ತೋರಿಸುತ್ತಿದೆ ಎಂದು ಗುಡುಗಿದರು.

ಕಾಂಗ್ರೆಸ್‍ನವರು ದಲಿತರ ಅಥವಾ ದಿಲ್ (ಹೃದಯ) ಪರ ಅಲ್ಲ, ಅವರು ಏನಿದ್ದರೂ ಡೀಲ್ ಪರ. ನಾನೇನೂ ಡೀಲ್ ಬಗ್ಗೆ ಹೇಳುತ್ತಿಲ್ಲ. ಆದರೆ ಟಿಕೆಟ್ ಹಂಚಿಕೆ ಹೊತ್ತಲ್ಲಿ ಡೀಲ್ ನಡೆದಿದೆ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರೇ ಹೇಳಿದ್ದರು. ಕಾಂಗ್ರೆಸ್ ಒಂದು ಕುಟುಂಬದ ಲಾಭಕ್ಕಾಗಿ ಟಿಕೆಟ್‍ ಹಂಚಿ, ಇತರ ಪಕ್ಷದೊಂದಿಗೆ ಕೈ ಜೋಡಿಸುತ್ತದೆ.

ಸುಳ್ಳು ಹೇಳುವುದು ಕಾಂಗ್ರೆಸ್‍ನ ಹೊಸ ಟ್ರೆಂಡ್. ಪ್ರತಿಯೊಂದು ಹಂತದಲ್ಲಿಯೂ ಅವರು ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಷ್ಟೊಂದು ಭ್ರಮೆಯಲ್ಲಿ ಕಾಂಗ್ರೆಸ್ ಇರಬಾರದು. ಅವರ ಸುಳ್ಳುಗಳನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ಈ ದೇಶದಲ್ಲಿ ಇಲ್ಲ ಎಂಬುದುನ್ನು ಅವರು ತಿಳಿದುಕೊಳ್ಳಬೇಕಿದೆ. ಹಾಗಾಗಿಯೇ ಅವರು ಪಂಜಾಬ್, ಪುದುಚೇರಿ ಮತ್ತು ಪರಿವಾರ್ ಮೂರು P ಗಳಿಗೆ ಸೀಮಿತವಾಗಿದ್ದಾರೆ. ವಾಜಪೇಯಿ ಪ್ರಧಾನಿಯಾದಾಗ ಬಿಜೆಪಿ ಸರ್ಕಾರ ಮೀಸಲಾತಿಯನ್ನು ನಿಲ್ಲಿಸಿ, ಸಂವಿಧಾನವನ್ನೇ ಬದಲಿಸುತ್ತದೆ ಎಂದು ಕಾಂಗ್ರೆಸ್ ವದಂತಿ ಹಬ್ಬಿಸಿತ್ತು. ಇದೀಗ ಬಿಜೆಪಿ ಸಂಸತ್‍ನಲ್ಲಿ ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ. ಹೀಗಿರುವಾಗ ನಾವು ಮೀಸಲಾತಿಯನ್ನು ರದ್ದು ಮಾಡಿದ್ದೇವೆಯೇ? ಇಂಥಾ ಸುಳ್ಳುಗಳನ್ನು ಹಬ್ಬಿಸುವುದರಿಂದ ಬಿಜೆಪಿಗೆ ಹಾನಿಯೇನೂ ಆಗುವುದಿಲ್ಲ. ಆದರೆ ಈ ಸುಳ್ಳುಗಳು ಸಮಾಜವನ್ನು ಒಡೆಯುತ್ತವೆ ಎಂದು ಮೋದಿ ಹೇಳಿದರು.

ನಮ್ಮ ಪ್ರಣಾಳಿಕೆ ಕೇವಲ ಪದಗಳಲ್ಲ, ಇದು ಯಡಿಯೂರಪ್ಪ ಮತ್ತು ಬಿಜೆಪಿಯ ವಾಗ್ದಾನಗಳು. ನಮ್ಮ ಪ್ರಣಾಳಿಕೆಯ ಬಗ್ಗೆ ಜನರಿಗೆ ತಿಳಿಸಿ, ನಮ್ಮ ಕಾರ್ಯ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಸಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ