ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಇಲ್ಲದ ಒಬ್ಬನೇ ಒಬ್ಬ ಸಚಿವರ ಹೆಸರನ್ನು ಹೇಳಿ – ಪ್ರಧಾನಿ ನರೇಂದ್ರ ಮೋದಿ

ವಿಜಾಪುರ(ಸರಾವಾಡ್),ಮೇ 8-ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಇಲ್ಲದ ಒಬ್ಬನೇ ಒಬ್ಬ ಸಚಿವರ ಹೆಸರನ್ನು ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸವಾಲು ಹಾಕಿದ್ದಾರೆ.
ಐದು ವರ್ಷಗಳ ಅವಧಿಯಲ್ಲಿ ಆಡಳಿತ ನಡೆಸಿರುವ ಅನೇಕ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರದಲ್ಲಿ ಆರೋಪವೇ ಇಲ್ಲದ ಒಬ್ಬನೇ ಒಬ್ಬನ ಹೆಸರನ್ನು ಹೇಳಿ ನೋಡೋಣ ಎಂದರು.  ಸರಾವಾಡ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ ಮೋದಿ, ಪ್ರಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿದರು.
ಇದೇ 15ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಕಾಂಗ್ರೆಸ್ ಸೋತರೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಗೂಬೆ ಕೂರಿಸಲು ಸಜ್ಜಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭವಿಷ್ಯ ನುಡಿದಿದ್ದಾರೆ.
ಕೆಲವರು ಜನರಿಂದ ತಿರಸ್ಕøತಗೊಂಡರೆ ಇವಿಎಂಗಳ ಮೇಲೆ ಸಂಶಯ ಪಡೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ಹಿಂದೆ ಅನೇಕ ರಾಜ್ಯಗಳಲ್ಲಿ ಸೋತಾಗ ಇದೇ ಕಾರಣ ನೀಡಲಾಯಿತು. 15ರ ಫಲಿತಾಂಶದಲ್ಲಿ ಸೋಲುವುದು ಖಚಿತ ಎಂದಿರುವ ಕಾಂಗ್ರೆಸ್ ನಾಯಕರು ಇವಿಎಂಗಳನ್ನು ಸಂಶಯದಿಂದ ನೋಡುತ್ತಿದ್ದಾರೆ ಎಂದು ಕುಹುಕವಾಡಿದರು.
ಜಗದ್ಗುರು ಶ್ರೀ ಬಸವಣ್ಣನವರನ್ನು ಸ್ಮರಿಸುವ ಮೂಲಕ ಭಾಷಣ ಆರಂಭಿಸಿದ ಮೋದಿ, ಇವನಾರವ, ಇವನಾವರ ಎಂದಿರನಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸದಿರಯ್ಯ ಎಂಬ ಬಸವಣ್ಣ ಹೇಳಿದ್ದರು. ಆದರೆ ಕಾಂಗ್ರೆಸಿಗರು ಜಾತಿ ಮತ್ತು ಧರ್ಮವನ್ನು ವಿಭಜಿಸುವ ದುಷ್ಕøತ್ಯಕ್ಕೆ ಕೈ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಸವಣ್ಣನವರು ಹುಟ್ಟಿದ ಈ ನಾಡಿನಲ್ಲಿ ವಿಭಜನೆಗೆ ಅವಕಾಶ ಕೊಡಬಾರದು. ಜಾತಿ ಮತ್ತು ಧರ್ಮಗಳ ನಡುವೆ ಚುನಾವಣೆಗಾಗಿ ಕಂದಕ ಸೃಷ್ಟಿಸುವ ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಸಾರಾಸಗಟಾಗಿ ತಿರಸ್ಕರಿಸಬೇಕೆಂದು ನೆರೆದಿದ್ದ ಜನರಿಗೆ ಮನವಿ ಮಾಡಿದರು.
ಇಲ್ಲಿನ ಜಲಸಂಪನ್ಮೂಲ ಸಚಿವರು(ಎಂ.ಬಿ.ಪಾಟೀಲ್) ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು(ಶರಣ ಪ್ರಕಾಶ್ ಪಾಟೀಲ್),ಗಣಿ ಸಚಿವ(ವಿನಯ್ ಕುಲಕರ್ಣಿ) ಧರ್ಮ ಒಡೆಯಲೆಂದೇ ದೆಹಲಿಯಲ್ಲಿ ಕುಳಿತು ಲಾಬಿ ನಡೆಸಿದರು. ಈ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ ಸಚಿವರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎಂದು ದೂರಿದರು.
ಈ ಮೂವರು ಸಚಿವರಿಗೆ ಬಸವಣ್ಣ , ಅಕ್ಕಮಹಾದೇವಿ, ಅಲ್ಲಮ್ಮಪ್ರಭು ಯಾರು ಎಂಬುದೇ ಗೊತ್ತಿಲ್ಲ.ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೂ ಇಲ್ಲ. ಇಂಥವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ವಿಭಜಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.ನಾವೆಲ್ಲ ಒಂದೇ ಎಂದಿದ್ದ ಬಸವಣ್ಣನವರಿಗೆ ಇದು ಮಾಡಿದ ಅಪಮಾನ. ಮತದಾರರು ಇದಕ್ಕೆ ಪಾಠ ಕಲಿಸುವುದೇ ಸರಿ ಎಂದು ಹೇಳಿದರು.
ಗುತ್ತಿಗೆದಾರರ ಹಣ ಸಚಿವರ ಮನೆಯಲ್ಲಿ:
ಸಚಿವರೊಬ್ಬರು ನೀರಾವರಿ ಯೋಜನೆಗಳನ್ನು ಬೇಕಾಬಿಟ್ಟಿ ಗುತ್ತಿಗೆದಾರರಿಗೆ ನೀಡಿದ್ದಾರೆ. ಅದರ ಪರಿಣಾಮವೇ ಇಂದು ಸಚಿವರು ಕಂತೆಕಂತೆ ಹಣವನ್ನು ಲೂಟಿ ಮಾಡಿದಂತಾಗಿದೆ. ಇಂಥವರನ್ನು ತಿರಸ್ಕರಿಸಿದಾಗಲೇ ಎಚ್ಚೆತ್ತುಕೊಳ್ಳುವುದು ಎಂದು ಕಿಡಿಕಾರಿದರು.
ಬಸವಣ್ಣನವರನ್ನು ವಿಶ್ವಕ್ಕೆ ಪರಿಚಯಿಸಿದ್ದು ಬಿಜೆಪಿ. ಮೊದಲ ಬಾರಿಗೆ ಸಂಸತ್‍ನ ಆವರಣದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು. ಲಂಡನ್‍ನ ಥೇಮ್ಸ್ ನದಿ ದಡದಲ್ಲಿ ನನಗೆ ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸುವ ಸುವರ್ಣಾವಕಾಶ ಸಿಕ್ಕಿತು. ಇದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಪ್ರಶಂಸಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅನುಭವ ಮಂಟಪದ ಮೂಲಕ ಆಡಳಿತ ವ್ಯವಸ್ಥೆಯನ್ನು ಜಾರಿ ಮಾಡಿದರು. ಇಂದಿನ ಮಠಮಾನ್ಯಗಳಲ್ಲಿ ನಡೆಯುತ್ತಿರುವ ತ್ರಿವಿಧ ದಾಸೋಹ ಪರಿಕಲ್ಪನೆಯನ್ನು ಬಸವಣ್ಣ ಪರಿಚಯಿಸಿದರು ಎಂದು ಸ್ಮರಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಕ್ಷೇತ್ರಗಳಲ್ಲು ಒತ್ತು ನೀಡಿದೆ. ಆರೋಗ್ಯ, ಶಿಕ್ಷಣ , ಕೈಗಾರಿಕೆ, ಮೂಲಭೂತ ಸೌಕರ್ಯಗಳು, ರೈತರಿಗೆ ಆರ್ಥಿಕ ನೆರವು ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಕೆಲವರು ಟೀಕೆಗೋಸ್ಕರ ಏನೂ ಮಾಡಿಲ್ಲ ಎಂದು ಹೇಳಿದರೆ ಜನರು ಮೂರ್ಖರೇ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ