ಬಿಜೆಪಿಯರು ಸೋಲುವ ಭೀತಿಯಿಂದ ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮೇ 8-ಬಿಜೆಪಿಯರು ಸೋಲುವ ಭೀತಿಯಿಂದ ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೆಲ್ಲುವುದಿಲ್ಲ ಎಂಬುದು ಬಿಜೆಪಿಯವರಿಗೆ ಖಚಿತವಾಗುತ್ತಿದೆ. ಹಾಗಾಗಿ ಹೇಗಾದರೂ ಗೆಲ್ಲಲೇಬೇಕೆಂದು ನಿರ್ಧರಿಸಿ ವಾಮಮಾರ್ಗದಿಂದ ಗೆಲುವು ಸಾಧಿಸಲು ಹೋಗುತ್ತಿದ್ದಾರೆ. ಆದರೆ ಇದು ಫಲ ನೀಡುವುದಿಲ್ಲ ಎಂದು ಹೇಳಿದರು.
ನಾನು ವಾಸ್ತವ್ಯ ಹೂಡಿದ್ದ ಬಾದಾಮಿಯ ಹೊರವಲಯದ ರೆಸಾರ್ಟ್ ಮೇಲೆ ಐಟಿ ದಾಳಿ ಮಾಡಲಾಗಿದೆ. ನರೇಂದ್ರ ಮೋದಿ, ಅಮಿತ್ ಷಾ ಅವರು ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಅವರಿಗೆ ಸ್ವಲ್ಪವಾದರೂ ಬುದ್ಧಿ ಬೇಡವಾ, ನಾನು ಅಲ್ಲಿದ್ದ ಮಾತ್ರಕ್ಕೆ ಅಲ್ಲೇ ಹಣ ಬಿಟ್ಟು ಬಂದಿರುತ್ತೇನಾ ಎಂದು ವ್ಯಂಗ್ಯವಾಡಿದರು.
ಅಮಿತ್ ಷಾ ಉಳಿದುಕೊಂಡಿದ್ದ ರೂಮಿನ ಮೇಲೆ ಏಕೆ ರೈಡ್ ಮಾಡಿಲ್ಲ? ಯಡಿಯೂರಪ್ಪ, ಜಗದೀಶ್‍ಶೆಟ್ಟರ್, ಈಶ್ವರಪ್ಪ ಅವರುಗಳ ಮನೆ ಮೇಲೆ ಯಾಕೆ ಐಟಿ ದಾಳಿ ಮಾಡಿಲ್ಲ ಎಂದು ಪ್ರಶ್ನಿಸಿದರು.
ಸಿಎಂ ಆಪ್ತ ಮರಿಗೌಡರ ಮನೆ ಮೇಲೆ ಐಟಿ ದಾಳಿ ಆಗಿದೆ ಎಂದು ಪ್ರಚಾರ ಮಾಡುತ್ತಿದ್ದೀರಾ ಎಲ್ಲಿ ದಾಳಿ ಆಗಿದೆ ಎಂಬ ಸತ್ಯಾಸತ್ಯತೆ ಖಚಿತಪಡಿಸಿಕೊಂಡು ಸುದ್ದಿ ಮಾಡಿ ಎಂದು ಸಲಹೆ ನೀಡಿದರು.
ಬಿಜೆಪಿಯವರು ಐಟಿ ದಾಳಿಯನ್ನಾದರೂ ಮಾಡಿಸಲಿ, ಇನ್ಯಾವುದೇ ದಾಳಿ ಮಾಡಿಸಲಿ ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಜನ ಕೂಡ ಇದನ್ನೇ ತೀರ್ಮಾನ ಮಾಡಿದ್ದಾರೆ. ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಸಿಎಂ ಭವಿಷ್ಯ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ