ಕಾವೇರಿ ನೀರು ಹಂಚಿಕೆ: ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ, ಮೇ 8- ಕಾವೇರಿ ನೀರು ಹಂಚಿಕೆ ಕುರಿತ ಕರಡು ಪ್ರತಿಯೊಂದಿಗೆ ಮೇ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂಕೋರ್ಟ್ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿದೆ.
ಕಾವೇರಿ ನೀರು ಹಂಚಿಕೆ ಕುರಿತ ಯೋಜನೆಯ ಕರಡು ಸಲ್ಲಿಕೆಗಾಗಿ ಮತ್ತೆ 10 ದಿನಗಳ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರ ನ್ಯಾಯಪೀಠವನ್ನು ಕೋರಿತ್ತು.
ಈ ಸಂಬಂಧ ಮೇ 14ರಂದು ಅಥವಾ ಅದಕ್ಕೂ ಮುಂಚಿತವಾಗಿ ಕಾವೇರಿ ಮ್ಯಾನೇಜ್‍ಮೆಂಟ್ ಸ್ಕ್ರೀಂ ಡ್ರಾಫ್ಟ್ ಜತೆ ವೈಯಕ್ತಿಕವಾಗಿ ಹಾಜರಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ. ಈಗಾಗಲೇ ನೀರು ಹಂಚಿಕೆ ಸಂಬಂಧ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಮತ್ತೆ ಈ ವಿಷಯವನ್ನು ಎಳೆಯುವುದು ಸರಿಯಲ್ಲ. ತೀರ್ಪನ್ನು ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ತಮಿಳುನಾಡು ಪರ ವಕೀಲ ಶೇಖರ್ ನಫಾಡೆ, ಕೇಂದ್ರ ಮತ್ತು ಕರ್ನಾಟಕ ರಾಜ್ಯ ನ್ಯಾಯಾಂಗ ನಿಂದನೆ ಮಾಡಿದೆ. ಈ ಬಗ್ಗೆ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಈ ಬಗ್ಗೆ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿರುವ ಕೇಂದ್ರ ಸರ್ಕಾರ, ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐ ತೀರ್ಪನ್ನು ಮಾರ್ಪಡಿಸುವ ಮೂಲಕ ಸುಪ್ರೀಂ ಕೋರ್ಟ್ ಕಳೆದ ಫೆ.16ರಂದು ನೀಡಿದ್ದ ತೀರ್ಪಿನನ್ವಯ ನೀರು ಹಂಚಿಕೆ ಕುರಿತ ಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರ ಸಭೆ ಆಯೋಜಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಹೇಳಿದೆ.
ಅಂತೆಯೇ ಜಲ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳೂ ರಾಷ್ಟ್ರದ ವಿವಿಧೆಡೆ ಅಸ್ತಿತ್ವದಲ್ಲಿರುವ ವಿವಿಧ ನದಿ ನೀರು ನಿರ್ವಹಣಾ ಮಂಡಳಿಗಳು, ನೀರು ನಿಯಂತ್ರಣ ಸಮಿತಿಗಳ ಕಾರ್ಯವೈಖರಿ ಬಗ್ಗೆ ಅವಲೋಕಿಸಿದೆ ಎಂದು ಕೇಂದ್ರವು ಸೋಮವಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಮೂಲಗಳು ತಿಳಿಸಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಕಾವೇರಿ ನದಿ ನೀರು ನಿರ್ವಹಣೆಯ ಕುರಿತ ಕರಡು ಸಿದ್ಧಪಡಿಸಿದೆಯಾದರೂ, ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಅಭಿಪ್ರಾಯದಂತೆ ಕೆಲ ತಿದ್ದುಪಡಿಗಳನ್ನು ಮಾಡಬೇಕಿದೆಯಂತೆ. ಹೀಗಾಗಿ ಸುಪ್ರೀಂ ಕೋರ್ಟ್ ಕರಡು ಸಲ್ಲಿಕೆ ಮಾಡುವ ಮುನ್ನ ಕೇಂದ್ರದ ಅನುಮೋದನೆ ಪಡೆಯಬೇಕಿದೆ ಎಂದು ತಿಳಿದುಬಂದಿದೆ.
ಇನ್ನು ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಸವಿಂಧಾನಿಕ ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ