ಚುನಾವಣಾ ಫಲಿತಾಂಶವು ಬಿಜೆಪಿಗೆ ತಕ್ಕಪಾಠ ಕಲಿಸಲಿದೆ – ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಮೇ 8- ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಬಿಜೆಪಿಗೆ ತಕ್ಕಪಾಠ ಕಲಿಸಲಿದೆ ಎಂದು ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಆರ್‍ಎಸ್‍ಎಸ್ ಸಲಹೆ ಮೇಲೆ ನಡೆಯುವ ಎನ್‍ಡಿಎ ನೇತೃತ್ವದ ಪಕ್ಷವನ್ನು ತಾವು ಸ್ವೀಕರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ರಾಜ್ಯದ ಜನತೆ ಬಿಜೆಪಿಗೆ ರವಾನಿಸಲಿದ್ದಾರೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಖರ್ಗೆ ವಿಶ್ಲೇಷಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯು ರಾಜ್ಯದ ಹಿತಾಸಕ್ತಿ ಮಾತ್ರವಲ್ಲದೆ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಿದರು.
ಬಿಜೆಪಿ ಪಕ್ಷದ ಮುಖಂಡರು ಅಲ್ಪಸಂಖ್ಯಾತರು, ದುರ್ಬಲ ವರ್ಗದವರು ಮತ್ತು ಬಡವರನ್ನು ವಿಶೇಷವಾಗಿ ಓಲೈಸುವ ತಮ್ಮದೇ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದಾರೆ. ಆದರೆ, ಬಿಜೆಪಿ ಮತ್ತು ಆರ್‍ಎಸ್‍ಎಸ್ ಬೆಂಬಲದ ಸರ್ಕಾರದಡಿ ನಮಗೆ ರಕ್ಷಣೆ ಇಲ್ಲ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಮನದಟ್ಟಾಗಿದೆ ಎಂದು ಖರ್ಗೆ ಹೇಳಿದರು.
ನೀವು (ಮತದಾರರು) ರಾಜ್ಯದಲ್ಲಿ ಬಿಜೆಪಿಯಲ್ಲಿ ತಡೆಗಟ್ಟದಿದ್ದರೆ ಅವರು ಖಂಡಿತವಾಗಿ ಪ್ರಜಾಪ್ರಭುತ್ವವನ್ನೇ ಧ್ವಂಸಗೊಳಿಸುತ್ತಾರೆ. ಈಗಾಗಲೇ ಸಂವಿಧಾನಕ್ಕೆ ಅನೇಕ ಮಾರ್ಪಾಡುಗಳನ್ನು ಮಾಡಿ ದೇಶಾದ್ಯಂತ ಗೊಂದಲ ಸೃಷ್ಟಿಸಿರುವ ಬಿಜೆಪಿ ಅಲ್ಪಸಂಖ್ಯಾತರ ವಿರುದ್ಧ ಹಿಂದುತ್ವವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ