ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಆತ್ಮವಿಶ್ವಾಸ ಇಲ್ಲ. ಹಾಗಾಗಿ ಜೆಡಿಎಸ್‍ನ ಓಲೈಸುವ ಯತ್ನ: ಡಿ.ಕೆ.ಶಿವಕುಮಾರ್ ಲೇವಡಿ

ಬೆಂಗಳೂರು, ಮೇ 4-ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಆತ್ಮವಿಶ್ವಾಸ ಇಲ್ಲ. ಹಾಗಾಗಿ ಜೆಡಿಎಸ್‍ನ ಓಲೈಸುವ ರಾಜಕಾರಣ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಪ್ರೆಸ್‍ಕ್ಲಬ್‍ನಲ್ಲಿಂದು ಬೆಂಗಳೂರು ವರದಿಗಾರರ ಒಕ್ಕೂಟ ಮತ್ತು ಪ್ರೆಸ್‍ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾತು ಮಂಥನ ಸಂವಾದದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯ ಮಾತು ಕೇಳುವುದಿಲ್ಲ. ಹಾಗಾಗಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಅಪನಂಬಿಕೆ ಇದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ನಂತರ ಜೆಡಿಎಸ್‍ನ್ನು ಹಚ್ಚಿಕೊಳ್ಳುವ ರಾಜಕಾರಣ ಮಾಡುತ್ತಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದ ತಕ್ಷಣ ದೇವೇಗೌಡರನ್ನು ಹೊಗಳಿದ್ದಾರೆ. ಅದರ ಅರ್ಥ ಬಿಜೆಪಿ ಪರಾವಲಂಬಿಯಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಯಡಿಯೂರಪ್ಪ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ, ಜೆಡಿಎಸ್‍ನಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಆದರೆ ಎಲ್ಲಾ ಪಕ್ಷಗಳಲ್ಲೂ ಸ್ಥಳೀಯ ನಾಯಕತ್ವದ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದರೆ, ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕತ್ವವನ್ನು ಮುಂದಿಟ್ಟು ಮತ ಕೇಳಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಅವರದೇನು ಇಲ್ಲಿ ನಡೆಯುತ್ತಿಲ್ಲ. ಎಲ್ಲವನ್ನು ಮೋದಿ ಮತ್ತು ಅಮಿತ್‍ಷಾ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನ ಇದನ್ನು ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು.

ನಾನು ಸಿಎಂ ರೇಸ್‍ನಲ್ಲಿಲ್ಲ:
ಸದ್ಯಕ್ಕೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಮುಂದಿನ ಚುನಾವಣೆಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್‍ಗಾಂಧಿ ಯಾರ ತಲೆ ಮೇಲೆ ಟೋಪಿ ಇಟ್ಟರೂ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಸದ್ಯಕ್ಕೆ ಮುಖ್ಯಮಂತ್ರಿಯಾಗಲು ನನಗೆ ಅರ್ಜೆಂಟ್ ಇಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರಪತ್ರ ಹೊರಡಿಸಿರಬಹುದು ಅದಕ್ಕೆ ನನ್ನ ಆಕ್ಷೇಪವಿಲ್ಲ. ಅದರಿಂದ ನಾನೇನು ಅಟ್ಟಕ್ಕೇರುವುದಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದರು.

ದಲಿತ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್‍ನಲ್ಲಿ ಮಾತ್ರ ಪ್ರಶ್ನಿಸಲಾಗುತ್ತಿದೆ. ಅದೇ ಜೆಡಿಎಸ್, ಬಿಜೆಪಿಯನ್ನು ಏಕೆ ಪ್ರಶ್ನಿಸುತ್ತಿಲ್ಲ. ಬಿಜೆಪಿಯಲ್ಲಿ ಲಿಂಗಾಯತರನ್ನು ಬಿಟ್ಟು ಒಕ್ಕಲಿಗರು ಅಥವಾ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಈ ಬಾರಿ ಒಕ್ಕಲಿಗರಿಗೆ ಅತಿ ಹೆಚ್ಚು ಟಿಕೆಟ್‍ಗಳನ್ನು ನೀಡಿದೆ. ಹಿಂದೆ ಎಸ್.ಎಂ.ಕೃಷ್ಣರಂತಹ ಪ್ರಭಾವಿ ನಾಯಕರಿದ್ದಾಗಲೂ ಇಷ್ಟು ಜನ ಒಕ್ಕಲಿಗ ಮುಖಂಡರಿಗೆ ಟಿಕೆಟ್ ನೀಡಿರಲಿಲ್ಲ ಎಂದು ಹೇಳಿದರು.

ಎಸ್.ಎಂ.ಕೃಷ್ಣ ಕಾಂಗ್ರೆಸ್‍ಗೆ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಅವರ ವಕ್ತಾರನಲ್ಲ, ಅವರು ಈಗ ಬಿಜೆಪಿಯಲ್ಲಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ಮೋದಿಯವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ನಾನು ಅವರ ಹೆಸರು ದುರುಪಯೋಗಪಡಿಸಿಕೊಳ್ಳುವುದಿಲ್ಲ ಇಚ್ಛಿಸುವುದಿಲ್ಲ ಎಂದರು.

ಸಿದ್ದರಾಮಯ್ಯನವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಹಿಂದೆ ಮೋದಿ ಕೂಡ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಕೇಳಿರಲಿಲ್ಲ. ಉತ್ತರ ಕರ್ನಾಟಕ ಭಾಗದ ಜನ ಸಿದ್ದರಾಮಯ್ಯ ಅವರು ಬಂದರೆ ಹೆಚ್ಚಿನ ಬಲ ಬರುತ್ತದೆ ಎಂದು ಬಯಸಿದ್ದರು ಆ ಕಾರಣಕ್ಕೆ ಹೈಕಮಾಂಡ್ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿತ್ತು ಎಂದರು.

ನನ್ನ ಆರ್ಥಿಕ ವ್ಯವಹಾರಗಳು ಪಾರದರ್ಶಕವಾಗಿವೆ. ಆಸ್ತಿಯಲ್ಲಿ ಯಾವುದೂ ಹೆಚ್ಚಳವಾಗಿಲ್ಲ. ಈ ಹಿಂದೆ ಬಂಗಾರಪ್ಪನವರು ಒಂದು ಲಕ್ಷ ರೂ.ಗೆ ಸೈಟ್ ನೀಡಿದ್ದರು. ಆದರೆ ಈಗ ಅದರ ಮಾರುಕಟ್ಟೆ ಬೆಲೆ 5 ಕೋಟಿಯಾಗಿದೆ. ಚುನಾವಣೆ ಆಯೋಗ ಪ್ರಸ್ತುತ ಮಾರುಕಟ್ಟೆ ದರ ಆಧರಿಸಿ ಆಸ್ತಿ ವಿವರ ಘೋಷಿಸುವಂತೆ ಸೂಚನೆ ನೀಡಿದೆ. ಸಬ್‍ರಿಜಿಸ್ಟ್ರಾರ್ ಕಚೇರಿ ನಿಗದಿಪಡಿಸಿದ ದರವನ್ನು ಲೆಕ್ಕ ಹಾಕಿ ನನ್ನ ಆಸ್ತಿ ಘೋಷಣೇ ಮಾಡಿದ್ದೇನೆ. ಹಾಗಾಗಿ ಅದು ಹೆಚ್ಚಳವಾಗಿ ಕಾಣುತ್ತಿದೆ ಎಂದು ಸಮರ್ಥಿಸಿಕೊಂಡರು.

ನಾಮಪತ್ರ ಸಲ್ಲಿಕೆಗೆ 10 ಸಾವಿರ ರೂ. ಠೇವಣಿ ಇಡಲು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಬಗ್ಗೆ ಉತ್ತರಿಸಿದ ಅವರು, 10 ಸಾವಿರ ರೂಪಾಯಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನನಗಿಲ್ಲ. ಆದರೆ ಸಾರ್ವಜನಿಕರ ಸಹಭಾಗಿತ್ವ ಬೇಕು ಎಂಬ ಕಾರಣಕ್ಕೆ ಎಲ್ಲರೂ ಹಣ ಸಂಗ್ರಹಿಸಿ ಠೇವಣಿ ಹಣ ಕಟ್ಟಿದ್ದೇನೆ. ಕನಕಪುರ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಾನೊಬ್ಬನೇ ಹಣ ಹಾಕುವ ಶಕ್ತಿ ಇತ್ತು. ಆದರೆ ಸಮುದಾಯ ಸಹಭಾಗಿತ್ವ ಇರಲಿ ಎಂಬ ಕಾರಣಕ್ಕೆ ಎಲ್ಲರಿಂದ ಹಣ ಸಂಗ್ರಹಿಸಿ ಕಚೇರಿ ಕಟ್ಟಲಾಗಿದೆ ಎಂದರು.

ಮೋದಿಯವರದ್ದು ಕೀಳುಮಟ್ಟದ ರಾಜಕಾರಣ:
ಪ್ರಧಾನಮಂತ್ರಿಯಾಗಿದ್ದವರು ಚುನಾವಣಾ ಕಾರಣಕ್ಕಾಗಿ ಕೆಳಮಟ್ಟಕ್ಕಿಳಿದು ಟೀಕೆ ಮಾಡಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ. ಬೆಂಗಳೂರಿನ ಜನ ಏನು ಪಾಪ ಮಾಡಿದ್ದಾರೆ.. ಬೆಂಗಳೂರನ್ನು ಪಾಪದ ನಗರವೆಂದು ಏಕೆ ಟೀಕಿಸಿದ್ದಾರೆ ಎಂದು ಪ್ರಶ್ನಿಸಿದರು.
ಐಟಿ ಉದ್ಯಮದಲ್ಲಿ ಬೆಂಗಳೂರು ನಗರ ಶೇ.39 ರಷ್ಟು ತೆರಿಗೆ ನೀಡುತ್ತಿದೆ.

ಹಿಂದೆ ವಿದೇಶದಿಂದ ಬಂದ ಗಣ್ಯರು ದೆಹಲಿ, ಮುಂಬೈಗೆ ಹೋಗುತ್ತಿದ್ದರು. ಆದರೆ ಈಗ ಬೆಂಗಳೂರು ಅಭಿವೃದ್ಧಿಯಾಗಿರುವುದರಿಂದ ಮೊದಲು ಇಲ್ಲಿಗೆ ಬಂದು ನಂತರ ಇತರ ರಾಜ್ಯಗಳಿಗೆ ಭೇಟಿ ನೀಡುತ್ತಾರೆ. ಬೆಂಗಳೂರು ದೇಶದ ಹೆಬ್ಬಾಗಿಲಾಗಿದೆ. ಇಂತಹ ನಗರವನ್ನು ಮೋದಿ ಪಾಪದ ನಗರ ಎಂದು ಕರೆದಿದ್ದಾರೆ. ಕಳೆದ ವರ್ಷ ಪ್ರವಾಸಿ ದಿವಸ್ ಸಮ್ಮೇಳನವನ್ನು ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿಯೇ ಆಯೋಜಿಸಿತ್ತು. ಇದೇ ಮೋದಿಯವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯದಲ್ಲಿ ಉತ್ತಮ ಆಡಳಿತ ಇದೆ, ಇಲ್ಲಿ ಬಂಡವಾಳ ಹೂಡಿಕೆ ಮಾಡಿ ಎಂದು ಹೇಳಿದ್ದರು. ಈಗ ಚುನಾವಣಾ ಕಾರಣಕ್ಕಾಗಿ ರಾಜಕೀಯ ಗಿಮಿಕ್‍ನ ಹೇಳಿಕೆ ನೀಡಿ ಬೆಂಗಳೂರನ್ನು ಅವಮಾನಿಸುತ್ತಿರುವುದು ಸರಿಯಲ್ಲ. ನಮ್ಮ ಸರ್ಕಾರದ ಮೇಲೆ ಅಥವಾ ಯಾವುದೇ ಸಚಿವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಸಹಕಾರ ನೀಡುತ್ತಿಲ್ಲ. ಕಲ್ಲಿದ್ದಲು ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದೆ. ಅದನ್ನು ಮೀರಿ ನಾವು ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಚುನಾವಣೆ ಕಾಲದಲ್ಲಿ ಕೇಂದ್ರ ಸರ್ಕಾರ ಆಡಳಿತವನ್ನು ದುರುಪಯೋಗಪಡಿಸಿ ಕೊಳ್ಳುತ್ತಿದೆ. ಚುನಾವಣಾ ಆಯೋಗವು ಪಕ್ಷಪಾತದಿಂದ ವರ್ತಿಸುತ್ತಿದೆ. ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸಂವಿಧಾನಿಕ ಸ್ಥಾನಮಾನ ಪಡೆದ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಗಳಂತೆ ವರ್ತಿಸಬಾರದು. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಆದಾಯ ತೆರಿಗೆ ಅಧಿಕಾರಿಗಳು ನನ್ನ ಮೇಲೆ ದಾಳಿ ಮಾಡಿದರು. ಅದು ಪ್ರತ್ಯೇಕ ಪ್ರಕರಣ. ಆದರೆ, ನಮ್ಮ ಪಕ್ಷದ ಸಣ್ಣಪುಟ್ಟ ನಾಯಕರ ಮೇಲೂ ದಾಳಿ ಮಾಡಲಾಗಿದೆ. ಬಿಜೆಪಿಯ ಒಬ್ಬ ನಾಯಕರ ಮೇಲೂ ದಾಳಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಯುವಕರು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ