ಜಯನಗರದ ವಾಜಪೇಯಿ ಎಂದೇ ಹೆಸರುವಾಸಿಯಾಗಿದ್ದ ಮಹಾನ್ ನಾಯಕ ಶಾಸಕ ಬಿ.ಎನ್.ವಿಜಯ್‍ಕುಮಾರ್

ಬೆಂಗಳೂರು, ಮೇ 4- ವಿದ್ಯಾರ್ಥಿ ಜೀವನದಿಂದಲೇ ಆರ್‍ಎಸ್‍ಎಸ್‍ನೊಂದಿಗೆ ಗುರುತಿಸಿಕೊಂಡಿದ್ದ ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರು ಜಯನಗರದ ವಾಜಪೇಯಿ ಎಂದೇ ಹೆಸರುವಾಸಿಯಾಗಿದ್ದ ಮಹಾನ್ ನಾಯಕರಾಗಿದ್ದರು.

ನೆಲಮಂಗಲ ಸಮೀಪದವರಾದ ವಿಜಯ್‍ಕುಮಾರ್ ಅವರು ತಮ್ಮ ಜೀವನ ಕಳೆದದ್ದು ಬೆಂಗಳೂರಿನಲ್ಲೇ. ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಆರ್‍ಎಸ್‍ಎಸ್‍ನ ಸೇವಿಕಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

1991ರಲ್ಲಿ ಆರ್‍ಎಸ್‍ಎಸ್‍ನಿಂದ ಬಿಜೆಪಿಗೆ ಬಂದ ಅವರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ರಾಜಕೀಯ ಜೀವನಕ್ಕೆ ಕಾಲಿರಿಸಿದರು.

ಜಯನಗರದಲ್ಲಿ ಎರಡು ಬಾರಿ ಸೋಲನುಭವಿಸಿ, ಎರಡು ಬಾರಿ ಶಾಸಕರಾಗಿ ಆರಿಸಿ ಬಂದಿದ್ದ ಅವರು, ಈ ಬಾರಿಯ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದರು.
ವಿಜಯ್‍ಕುಮಾರ್ ಅವರ ಇಡೀ ಕುಟುಂಬವೇ ದೇಶಕ್ಕಾಗಿ ದುಡಿಯುತ್ತಿದೆ. ಐದು ಮಂದಿ ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಹೊಂದಿರುವ ವಿಜಯ್‍ಕುಮಾರ್ ಅವರು ದೇಶಸೇವೆಗಾಗಿ ಮದುವೆಯಾಗದೆ ಅವಿವಾಹಿತರಾಗೇ ಉಳಿದುಕೊಂಡಿದ್ದರು.

ವಿಜಯ್‍ಕುಮಾರ್ ಹಾಗೂ ಅವರ ದೊಡ್ಡಣ್ಣ ಅವಿವಾಹಿತರಾಗಿದ್ದರೆ, ಉಳಿದವರು ವಿವಾಹಿತರಾಗಿದ್ದಾರೆ. ಇವರ ಚಿಕ್ಕ ತಮ್ಮ ಆರ್‍ಎಸ್‍ಎಸ್‍ನಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘ ಪರಿವಾರದ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಜಯ್‍ಕುಮಾರ್ ಅವರ ಇಡೀ ಕುಟುಂಬ ಸೆರೆಮನೆ ವಾಸ ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರೂ ರಾಜಕೀಯ ವಲಯದಲ್ಲಿ ಅಜಾತಶತ್ರುವಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ