ಬೀದರ್, ಮೇ 3.- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಔರಾದ್ಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ ಪರವಾಗಿ ಮತಯಾಚಿಸಿದರು.
ಔರಾದ್ ಮಿನಿ ವಿಧಾನಸೌಧ ಬಳಿ ನಿರ್ಮಿಸಲಾದ ವಿಶಾಲವಾದ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಭಾಷಣ ಮಾಡಲು ಮೊದಿಯವರಿಗೆ ಯಾವುದೇ ವಿಷಯಗಳು ಬಾಕಿ ಉಳಿದಿಲ್ಲ ಏಕೆಂದರೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಎಲ್ಲ ಜನಸಮುದಾಯದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಆದ್ದರಿಂದ ಮೋದಿಯವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಅವಹೇಳನಕಾರಿ ಮಾತನಾಡುವುದು ಮೋದಿಯವರಿಗೆ ಭೂಷಣವಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಜೈಲಿಗೆ ಹೋಗಿ ಬಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರೆಡ್ಡಿ ಬ್ರದರ್ಸ್ ಮತ್ತಿತರರನ್ನು ಬಗಲಲ್ಲಿ ಇಟ್ಟುಕೊಂಡಿರುವ ನರೇಂದ್ರ ಮೋದಿಅವರು ಭ್ರಷ್ಠಾಚಾರ ವಿರೋಧಿ ಭಾಷಣ ಮಾಡುವುದು ನುಡಿದಂತೆ ನಡೆ ಎಂಬ ಶರಣರ ತತ್ವಕ್ಕೆ ವಿರುದ್ಧವಾಗಿದೆ ಎಂದು ಮೋದಿಯವರನ್ನು ಕುಟುಕಿದ್ದಾರೆ.
ಕರ್ನಾಟಕ ಸರ್ಕಾರ ತನ್ನ ವ್ಯಾಪ್ತಿಯ ಒಳಗೆ ಸಿಎಂ ಸಿದ್ಧರಾಮಯ್ಯ 8 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದ್ದಾರೆ. ಆದರೆ ನರೇಂದ್ರ ಮೋದಿ ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ ಹೊರತು ರೈತರ ಸಾಲವನ್ನಲ್ಲ ಎಂದು ದೂರಿದರು.
ನೋಟ್ ಬಂದಿ ಮಾಡಿ ಜನ ಸಾಮಾನ್ಯರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತಮ್ಮ ಹಣ ಪಡೆಯಲು ಸರದಿಗೆ ನಿಲ್ಲಿಸಿರುವುದೇದ ಜನರಿಗೆ ಮಾಡಿದ ಬಹು ದೊಡ್ಡ ಕೊಡುಗೆಯಾಗಿದೆ. ಭ್ರಷ್ಠಾಚಾರ ವಿರುದ್ಧ ಹೋರಾಡುತ್ತೇನೆ ಎಂದು ಹೇಳುವ ಮೋದಿ ನೀರವ ಮೋದಿ, ವಿಜಯಮಲ್ಯಾ, ಅಮೀತ ಶಾ ಮಗನ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಕೆ.ಎಚ್. ಮುನಿಯಪ್ಪ, ಸಿ. ವೇಣುಗೋಪಾಲ್, ಸಾಕೆ ಶೈಲಜನಾಥ, ಈಶ್ವರ್ ಖಂಡ್ರೆ, ವಿಜಯಸಿಂಗ್, ಭಾರತಬಾಯಿ ಶೇರಿಕಾರ, ಬಸವರಾಜ ಜಾಬಶೆಟ್ಟಿ, ಗೀತಾ ಚಿದ್ರಿ, ಡಾ. ಲಕ್ಷ್ಮಣ ಸೋರಳ್ಳಿ, ಬಕ್ಕಪ್ಪ ಕೋಟೆ, ಶಂಕರರಾವ ದೊಡ್ಡಿ, ಸವಿತಾ ಪಾಟೀಲ್, ಡಾ. ರತಿಕಾಂತ ಮಜಗೆ, ಚರಣಸಿಂಗ್ ರಾಠೋಡ್, ರಾಮ ನರೋಟೆ ಇತರರು ಇದ್ದರು.