ಪ್ರಧಾನಿ ಮೋದಿ ಸರ್ಕಾರ ನಮ್ಮ ಯೋಜನೆಗಳನ್ನು ಬಳಸಿಕೊಂಡು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಬೀದರ್‌:ಮೇ-3: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಕಲಬುರಗಿಯಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್ ನಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಬೀದರ್ ನ ಔರಾದ್ ನಲ್ಲಿ ಕಾಂಗ್ರೆಸ್ ಪರ ಪ್ರಚಾರ ಭಾಷಣ ಮಾಡಿದ ರಾಹುಲ್ ಗಾಂಧಿ, ಬಸವೇಶ್ವರರು ಹೇಳಿದಂತೆ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಾವು ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿಲ್ಲ. ಅವರು, ನಮ್ಮ ಮೇಲೆ ವೈಯಕ್ತಿಕ ಆರೋಪ ಮಾಡ್ತಿದ್ದಾರೆ. ನಾವು ಅವರ ಮಟ್ಟಕ್ಕೆ ಹೋಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ನಾಲ್ಕು ಮಂತ್ರಿಗಳು ಜೈಲಿಗೆ ಹೋಗಿ ಬಂದಿದ್ದಾರೆ. ಇಂತಹ ವ್ಯಕ್ತಿಗಳನ್ನು ಆರಿಸಿ ಕಳುಹಿಸುತ್ತೀರಾ..?. ಕೇಂದ್ರ ಸರ್ಕಾರ ನಮ್ಮದೇ ಮನ್ರೇಗಾ ಯೋಜನೆ ಬಳಸಿಕೊಂಡು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ಬ್ಯಾಂಕಿಂಗ್‌ ವ್ಯವಸ್ಥೆ ಹಾಳಾಗಿದೆ. ಚೋಕ್ಸಿ, ನೀರವ್‌ ಮೋದಿ, ಮಲ್ಯ ದೇಶದಿಂದ ಓಡಿ ಹೋಗಲು ಬಿಟ್ಟಿದ್ದೀರಿ. ಇದೇ ನಿಮ್ಮ ಸಾಧನೆಯೇ ಎಂದು ಪ್ರಧಾನಿ ಮೋದಿ ಅವರನ್ನು ತಿವಿದರು.

ಜಿಎಸ್‌ಟಿ ಟ್ಯಾಕ್ಸ್‌ ಮೂಲಕ ದೇಶದ ಜನರನ್ನು ಕೊಳ್ಳೆ ಹೊಡೆದಿದ್ದೀರಿ. ಶೋಲೆ ಸಿನಿಮಾದಲ್ಲಿ ಗಬ್ಬರ್‌ ಸಿಂಗ್‌ ಇರುವಂತೆ ಯಡಿಯೂರಪ್ಪ, ರೆಡ್ಡಿ ಸಹೋದರರು ಕೊಳ್ಳೆ ಹೊಡೆದಿದ್ದಾರೆ. ಇಂತಹವರನ್ನು ಆರಿಸಿ ಕಳುಹಿಸುತ್ತೀರಾ?. ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿ ಕಳುಹಿಸುವಂತೆ ಮನವಿ ಮಾಡುತ್ತಿದ್ದಾರೆ. ಇಂತಹವರು ಆರಿಸಿ ಬರುವುದು ರಾಜ್ಯದ ಜನರಿಗೆ ಬೇಕಾ ಎಂದು ರಾಹುಲ್‌ ಗಾಂಧಿ ಪ್ರಧಾನಿ ಮೋದಿಗೆ ಟಾಂಗ್‌ ನೀಡಿದರು.

ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ನಡೆಸಿರುವ ಮೋದಿ ಇವತ್ತು ಕಲಬುರಗಿ, ಬಳ್ಳಾರಿ ಮತ್ತು ಬೆಂಗಳೂರಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇತ್ತ, ಕಾಂಗ್ರೆಸ್‌ ಅಧ್ಯಕ್ಷ ರಾಗಾ ಪಕ್ಷದ ಜನಾಶೀರ್ವಾದ ಯಾತ್ರೆಯನ್ನು ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ