
ಅರಕಲಗೂಡು: ಮೇ-3: ಕರ್ನಾಟಕದಿಂದ ತಮಿಳುನಾಡಿಗೆ ಕೂಡಲೇ ೪ ಟಿಎಂಸಿ ನೀರು ಬಿಡಿ ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಮಾತನಾಡಿದ ಅವರು, ಈ ಹಿಂದೆ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಗಡುವು ನೀಡಿದ್ದ ಸುಪ್ರೀಂನಿಂದ ಇಂದು ಪೂರಕ ತೀರ್ಪು ಹೊರ ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ನಮ್ಮ ಜಲಾಶಯಗಳಲ್ಲೇ ನೀರಿನ ಕೊರತೆ ಇರುವಾಗ ಈ ಆದೇಶ ನೀಡಿರುವುದು ಬೇಸರ ತಂದಿದೆ ಎಂದರು.
ಬೆಂಗಳೂರು ಸೇರಿದಂತೆ ಎಷ್ಟೋ ಕಡೆ ಕುಡಿಯಲು ನೀರಿಲ್ಲ. ಹೀಗಿರುವಾಗ ನೀರು ಬಿಡಲು ಹೇಗೆ ಸಾಧ್ಯ ಎಂದು ಪ್ರೆಶ್ನಿಸಿದರು.
ಈ ಬಗ್ಗೆ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡುವೆ ಎಂದರು.
ನಮಗೇ ಕುಡಿಯಲು ನೀರಿಲ್ಲದ ಮೇಲೆ ಸುಪ್ರೀಂ ಆದೇಶ ಪಾಲನೆ ಬಗ್ಗೆ ಏನು ಮಾಡಬೇಕು ಎಂಬುದನ್ನು ಸರಕಾರ ಗಣನೆಗೆ ತೆಗೆದು ಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇನ್ನು ದೇವೇಗೌಡರು ಯಾರ ಕಡೆ ಇದ್ದಾರೆ ಎಂಬುದನ್ನು ನಾಡಿನ ಜನರ ಮುಂದೆ ಹೇಳಲಿ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ಅವರಿನ್ನೂ ಚಿಕ್ಕವರು. ಏಕವಚನದಲ್ಲಿ ದುರಹಂಕಾರದಿಂದ ಮಾತನಾಡುವ ನನ್ನ ಹಿಂದೆ ಬೆಳೆದ ಸಿದ್ದರಾಮಯ್ಯ ೧೨೦ ಸ್ಥಾನ ಗೆಲ್ಲುವುದಾರೆ ದೇವೇಗೌಡರ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ 120 ಸ್ಥಾನ ಗೆಲ್ಲುವುದು ಕನಸಿನ ಮಾತು, ಅವರಿಗೆ 115 ಬರೊದಾದ್ರೆ ನನ್ನನ್ನ ಯಾಕೆ ಕೇಳಬೇಕು ಎಂದು ತಿರುಗೇಟು ನೀಡಿದರು.
ಈ ಚುನಾವಣೆ ಅಷ್ಟು ಸುಲಭವಲ್ಲ. ದೇವೇಗೌಡರ ಶಕ್ತಿ 48 ಇರುತ್ತೊ112 ಇರುತ್ತೊ ಕಾದು ನೋಡಿ, ನಾವೇ ಸರ್ಕಾರ ಮಾಡ್ತೇವೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ನಿಶ್ಚಿತ. ಇದಕ್ಕಾಗಿ ಅನೇಕರು ನಮಗೆ ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗ ಬೇರೆಯವರಿಗೇಕೆ ಸಹಕಾರ ನೀಡಲಿ ಎಂದರು.