ಬೆಂಗಳೂರು, ಮೇ 2-ಸ್ಯಾಂಡಲ್ವುಡ್ ತಾರೆಯರಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಟಿ ಪ್ರಮಿಳಾ ಜೋಷಾಯ್ ಮತ್ತು ನಟ ಎಂ.ಕೆ.ಸುಂದರ್ರಾಜ್ ಅವರ ಪುತ್ರಿ ಮೇಘನಾ ರಾಜ್ ಹಾಗೂ ಶಕ್ತಿ ಪ್ರಸಾದ್ ಮೊಮ್ಮಗ ಚಿರಂಜೀವಿ ಸರ್ಜಾ ಅವರ ಮದುವೆ ಬಹಳ ಅದ್ಧೂರಿಯಾಗಿ ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಇಂದು ಶುಭ ಮಿಥುನ ಲಗ್ನದಲ್ಲಿ ನೆರವೇರಿತು.
ವೆಂಕಟೇಶ್ವರ-ಪದ್ಮಾವತಿ ಆಸೀನರಾಗುವ ಮಂಟಪದ ಮಾದರಿಯಲ್ಲಿ ಮದುವೆ ಮಂಟಪವನ್ನು ಬಂಗಾರದ ಬಣ್ಣದ ಆಸನ ಸೇರಿದಂತೆ ಅದ್ಧೂರಿಯಾಗಿ ನಿರ್ಮಿಸಲಾಯಿತು. ಕಾನ್ಸೆಪ್ಟ್ನಲ್ಲಿ ಮದುವೆ ಮಂಟಪ ರೆಡಿ ಮಾಡಲಾಗಿತ್ತು. ಮೇಘನಾ ರಾಜ್ ಅವರು ಕ್ರೀಮ್ ಕಲರ್ ಮತ್ತು ಗೋಲ್ಡ್ ಮಿಕ್ಸ್ ಗ್ರೀನ್ ಬಾರ್ಡರ್ ರೇಷ್ಮೆ ಸೀರೆ ಧರಿಸಿದ್ದರೆ, ಚಿರಂಜೀವಿ ಸರ್ಜ ರೇಷ್ಮೆ ಶಲ್ಯ, ಪಂಚೆಯಿಂದ ಕಂಗೊಳಿಸುತ್ತಿದ್ದರು.
ಕಳೆದ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್ನಲ್ಲಿ ಉಂಗುರ ಬದಲಾಯಿಸಿ ವಿವಾಹವಾಗಿದ್ದರು. ಇಂದು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾದರು.
ಕಳೆದ ಒಂದು ವಾರದಿಂದ ಮೇಘನ ರಾಜ್ ಅವರ ಮನೆಯಲ್ಲಿ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಚಪ್ಪರ ಶಾಸ್ತ್ರ ಸೇರಿದಂತೆ ಹಲವು ಹಿಂದೂ ಸಂಪ್ರದಾಯದ ಶಾಸ್ತ್ರಗಳು ಅದ್ಧೂರಿಯಾಗಿ ನೆರವೇರಿದ್ದವು. ಇಂದು ಸಂಜೆ ಆರತಕ್ಷತೆಯೂ ನಡೆಯಲಿದೆ.
ಇಂದು ನಡೆದ ಮದುವೆಗೆ ಹಿರಿಯ ನಟ ಶ್ರೀಧರ್, ಭಾರತಿ ವಿಷ್ಣುವರ್ಧನ್, ಅನಿರುದ್ಧ ಕುಟುಂಬ, ಅರ್ಜುನ್ ಸರ್ಜ ಕುಟುಂಬ ಸೇರಿದಂತೆ ಮತ್ತಿತರ ಚಿತ್ರರಂಗದ ಹಲವಾರು ಗಣ್ಯರು ವಧು-ವರರಿಗೆ ಆಶೀರ್ವದಿಸಿದರು.