ಹಾಲಿ ಸಚಿವರು, ಶಾಸಕರು, ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡ ಮತದಾರರು

 

ಬೆಂಗಳೂರು, ಮೇ 2- ಕೆಲ ಹಾಲಿ ಸಚಿವರು, ಶಾಸಕರು, ಅಭ್ಯರ್ಥಿಗಳು ಮತ ಯಾಚನೆಗೆ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿ ಸುತ್ತಿ ಸುಸ್ತಾಗುತ್ತಿದ್ದರೆ, ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಮತದಾರರು ಅವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡು ಬೆವರಿಳಿಸುತ್ತಿದ್ದಾರೆ.
ಸಚಿವರು, ಶಾಸಕರು ಎಂದು ಯಾರನ್ನೂ ಹಿಂದೆ ಮುಂದೆ ನೋಡುತ್ತಿಲ್ಲ. ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಈಗ ಏಕೆ ಗ್ರಾಮಕ್ಕೆ ಬಂದಿದ್ದೀರಿ ಎಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿರುವ ಪ್ರಕರಣಗಳು ಹಲವೆಡೆ ನಡೆದಿವೆ. ಈ ಹಿಂದೆ ಶಾಸಕರು, ಸಚಿವರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಭರವಸೆಗಳನ್ನು ನೀಡಿದ್ದರು. ಅವು ಈವರೆಗೆ ಈಡೇರಿದಂತಿಲ್ಲ. ಅದಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬರುವವರನ್ನು ನಿರ್ದಾಕ್ಷಿಣ್ಯವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮೈಸೂರು, ಹುಣಸೂರು ತಾಲೂಕು, ಭರತನಾಡಿ ಗ್ರಾಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್‍ಗೆ ಗ್ರಾಮಸ್ಥರು ಮತ ಪ್ರಚಾರ ಸಂದರ್ಭದಲ್ಲೇ ತರಾಟೆಗೆ ತೆಗೆದುಕೊಂಡರು.
ಯಾವುದೇ ಕೆಲಸ ಮಾಡಿಕೊಟ್ಟಿಲ್ಲ, ಈಗ್ಯಾಕೆ ನಮ್ಮ ಗ್ರಾಮಕ್ಕೆ ಬಂದಿದ್ದೀರಿ. ನಮ್ಮ ಗ್ರಾಮದ ಹೆಸರು ನಿಮಗೆ ಗೊತ್ತ ಎಂದು ಹರಿಹಾಯ್ದಿದ್ದಾರೆ.

ಇನ್ನು ಕೊಪ್ಪಳ ಜಿಲ್ಲೆ ಯಲಬುರ್ಗದಲ್ಲಿ ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಬಸವರಾಜ ರಾಯರೆಡ್ಡಿಗೆ ಅವರದೇ ಪಕ್ಷದ ಕಾರ್ಯಕರ್ತ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ವಾಲ್ಮೀಕಿ ಸಮುದಾಯಕ್ಕೆ ನೀವೇನು ಮಾಡಿದ್ದೀರಿ. ವಾಲ್ಮೀಕಿ ಭವನ ನಿರ್ಮಿಸಿಕೊಡಲಿಲ್ಲ. ಆಶ್ರಯ ಮನೆ ಯೋಜನೆಯಡಿ ಮನೆ ಕೊಟ್ಟಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಂತೆ ಬಸವರಾಜ ರಾಯರೆಡ್ಡಿ ಅವರು ಗಲಿಬಿಲಿಗೊಂಡಿದ್ದಾರೆ. ಇದನ್ನು ಗಮನಿಸಿದ ಅವರ ಬೆಂಬಲಿಗರು ಆತನನ್ನು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ.

ರಾಯಚೂರು ಜಿಲ್ಲೆ, ಲಿಂಗಸಗೂರು, ಬ್ಯಾಲಿಹಾಳು ಗ್ರಾಮದಲ್ಲಿ ಜೆಡಿಎಸ್‍ನಿಂದ ಬಿಜೆಪಿ ಸೇರಿದ್ದ ಮಾನಪ್ಪ ವಜ್ಜಲ್ ಅವರ ಸೊಸೆ ಮತ ಕೇಳಲು ಬಂದಾಗ ಅವರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.

ಇನ್ನು ಸಚಿವ ತನ್ವೀರ್ ಸೇಠ್ ಅವರು ನರಸಿಂಹರಾಜ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ರಸ್ತೆ ಸರಿಯಾಗಿ ಮಾಡಿಲ್ಲವೆಂದು ಅಲ್ಲಿನ ಮತದಾರರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಆಪ್ತ ಸಹಾಯಕರು ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಮಧ್ಯ ಪ್ರವೇಶಿಸಿದ ಸಚಿವರು ಅವರ ಮನವಿ ಆಲಿಸಿ ಅಲ್ಲಿಂದ ಜಾಗ ಖಾಲಿ ಮಾಡಿದರು.

ನಿನ್ನೆಯಷ್ಟೆ ತುಮಕೂರಿನ ಶಿರಾದಲ್ಲಿ ಸಚಿವ ಜಯಚಂದ್ರ ಅವರನ್ನು ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಅವರನ್ನು ಕೂಡ ಮತದಾರರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು.
ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕ, ಬಳ್ಳಾರಿ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ನಡೆದಿವೆ. ರಾಜಕಾರಣಿಗಳು ಈಡೇರಿಸದ ಭರವಸೆಗಳನ್ನು ಏಕೆ ನೀಡಬೇಕು. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಮೇಲೆ ಏಕೆ ಆಯ್ಕೆಯಾಗಬೇಕು. ಕೇವಲ ಸುಳ್ಳು ಭರವಸೆಗಳನ್ನು ಏಕೆ ನೀಡಬೇಕು ಎಂದು ಜನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ