ಹುಸಿ ಭರವಸೆಗಳಿಗೆ ಮನಸೋಲದೆ ರೈತರ ಪ್ರಣಾಳಿಕೆ ಒಪ್ಪುವ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಬೇಕು: ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ

ಬೆಂಗಳೂರು, ಮೇ 2-ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹುಸಿ ಭರವಸೆಗಳಿಗೆ ಮನಸೋಲದೆ ರೈತರ ಪ್ರಣಾಳಿಕೆ ಒಪ್ಪುವ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಬ್ಯಾಂಕ್‍ಗಳ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು, ರೈತರ ಮೇಲೆ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ವಾಪಸ್ ಪಡೆಯಬೇಕು, ಬೆಲೆ ಕುಸಿತವಾದಾಗ ಕನಿಷ್ಠ ಬೆಂಬಲ ಬೆಲೆ ನೀಡಿ ಕೃಷಿ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಬೇಕು, ಕೃಷಿ ಬೆಲೆ ನಿಗದಿ ಆಯೋಗಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದು ಸೇರಿದಂತೆ 16 ಅಂಶಗಳ ರೈತ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದರು.

ಈ ಪ್ರಣಾಳಿಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮೈಸೂರಿನಿಂದ ನಾಳೆ ಬೈಕ್ ರ್ಯಾಲಿ ನಡೆಸಲಾಗುವುದು. ಅಲ್ಲದೆ, ನಾಲ್ಕು ತಂಡಗಳಲ್ಲಿ ಬೇರೆ ಬೇರೆ ಭಾಗಗಳಲ್ಲೂ ರ್ಯಾಲಿ ನಡೆಸಲಾಗುವುದು ಎಂದು ಹೇಳಿದರು.

ರೈತರ ಆತ್ಮಹತ್ಯೆಯನ್ನು ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಗಂಭೀರವಾಗಿ ಪರಿಗಣಿಸುವುದಿಲ್ಲ. ರೈತರ ಸಂಕಷ್ಟ ಕೇಳುವುದಿಲ್ಲ. ಹಾಗಾಗಿ ರೈತರ ಹಿತ ಕಾಯುವ ಮತ್ತು ರೈತರಿಗೆ ಅಗತ್ಯವಿರುವ ಪ್ರಣಾಳಿಕೆ ಒಪ್ಪುವಂತಹ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದ ಅವರು, ಪ್ರಣಾಳಿಕೆ, ಭರವಸೆಗಳನ್ನು ಈಡೇರಿಸದ ಪಕ್ಷದ ಮಾನ್ಯತೆಯನ್ನು ಚುನಾವಣಾ ಆಯೋಗ ರದ್ದು ಮಾಡಬೇಕೆಂದು ಆಗ್ರಹಿಸಿದರು.

ಕಳೆದ ನಾಲ್ಕು ತಿಂಗಳಿಂದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 1200 ಕೋಟಿ ರೂ.ಗೂ ಹೆಚ್ಚು ಹಣ ಪಾವತಿಸಿಲ್ಲ. ಹಾಗಾಗಿ ಎಸ್‍ಎಪಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವಣ್ಣನವರ್, ವೀರಣ್ಣಗೌಡ ಪಾಟೀಲ, ಅತ್ತಳ್ಳಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ