ಲಖನೌ:ಏ-23: ಚಾಲಕ ಮುಸ್ಲಿಂ ಆದ್ದರಿಂದ ಓಲಾ ಕ್ಯಾಬ್ ರದ್ದುಪಡಿಸಿದೆ ಎಂದು ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಸಂದೇಶ ಪ್ರಕಟಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
‘ಚಾಲಕ ಮುಸ್ಲಿಂ ಆದ್ದರಿಂದ ಓಲಾ ಕ್ಯಾಬ್ ಬುಕಿಂಗ್ ರದ್ದುಪಡಿಸಿದೆ. ನನ್ನ ಹಣವನ್ನು ಜಿಹಾದಿಗಳಿಗೆ ನೀಡಲು ಬಯಸುವುದಿಲ್ಲ’ ಎಂದು ಅಭಿಷೇಕ್ ಮಿಶ್ರಾ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದರು. ಟ್ವೀಟ್ ಜತೆಗೆ ಓಲಾ ಕ್ಯಾಬ್ ಬುಕಿಂಗ್ ರದ್ದುಪಡಿಸಿದ ಸ್ಕ್ರೀನ್‌ಶಾಟ್ ಅನ್ನೂ ಪ್ರಕಟಿಸಿದ್ದರು. ಅದರಲ್ಲಿ ಚಾಲಕನ ಹೆಸರು ಮಸೂದ್ ಅಸ್ಲಾಂ ಎಂದು ಕಂಡುಬಂದಿದೆ.
ತಾನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಸಕ್ರಿಯ ಸದಸ್ಯ ಎಂದು ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಅಭಿಷೇಕ್ ಹೇಳಿಕೊಂಡಿದ್ದಾರೆ. ವಿಎಚ್‌ಪಿಯ ಉತ್ತರ ಪ್ರದೇಶ ಘಟಕದ ಐಟಿ ಸೆಲ್‌ನ ಜವಾಬ್ದಾರಿ ನಿರ್ವಹಿಸುತ್ತಿರುವುದಾಗಿಯೂ ನಮೂದಿಸಿದ್ದಾರೆ. ಫೇಸ್‌ಬುಕ್‌ನಲ್ಲಿರುವ ಮಾಹಿತಿ ಪ್ರಕಾರ ಅಭಿಷೇಕ್ ಅಯೋಧ್ಯೆಯವರಾಗಿದ್ದು, ಲಖನೌನಲ್ಲಿ ಐಟಿ ಉದ್ಯೋಗಿ.
ಅಭಿಷೇಕ್ ಟ್ವೀಟ್‌ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಲವರು ಆಗ್ರಹಿಸಿದ್ದಾರೆ. ಇನ್ನು ಕೆಲವರು, ಅಭಿಷೇಕ್‌ಗೆ ಪ್ರಯಾಣಿಕನ ಪಟ್ಟಿಯಲ್ಲಿ ನಿಷೇಧ ಹೇರುವಂತೆ ಓಲಾವನ್ನು ಒತ್ತಾಯಿಸಿದ್ದಾರೆ.
ಇನ್ನು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಓಲಾ, ‘ನಮ್ಮದು ಜಾತ್ಯತೀತ ಸಂಸ್ಥೆ. ಚಾಲಕರು ಮತ್ತು ಪ್ರಯಾಣಿಕರನ್ನು ನಾವು ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ತಾರತಮ್ಯದಿಂದ ನೋಡುವುದಿಲ್ಲ. ಎಲ್ಲರನ್ನೂ ಎಲ್ಲ ಸಮಯದಲ್ಲಿಯೂ ಗೌರವದಿಂದ ಕಾಣಬೇಕು ಎಂದು ನಮ್ಮ ಎಲ್ಲ ಪ್ರಯಾಣಿಕರು ಮತ್ತು ಚಾಲಕರನ್ನು ನಾವು ಆಗ್ರಹಿಸುತ್ತೇವೆ ಎಂದು ಹೇಳಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಸಹ ಟ್ವಿಟರ್‌ನಲ್ಲಿ ಅಭಿಷೇಕ್ ಫಾಲೋವರ್ಸ್‌ಗಳಾಗಿದ್ದಾರೆ.
Man cancelling Ola cab, because driver was Muslim;Abhishek Mishra,Twitter