ದೇಶದ ಹಲವೆಡೆ ಎಟಿಎಂ ಖಾಲಿ, ಖಾಲಿ; ನಗದು ಕೊರತೆ!

ಹೊಸದಿಲ್ಲಿ,ಏ.17

ದೇಶದ ಹಲವೆಡೆ ಎಟಿಎಂಗಳಲ್ಲಿ ನೋ ಕ್ಯಾಶ್ ಫಲಕ ನೇತಾಡುತ್ತಿದೆ. ಆ ಮೂಲಕ ಮತ್ತೆ ನೋಟು ಅಮಾನ್ಯದ ಕರಾಳ ದಿನಗಳನ್ನು ನೆನಪಿಸಿದೆ.

ತೆಲಂಗಾಣ, ಹೈದರಾಬಾದ್‌, ವಾರಾಣಸಿ, ವಡೋದರ, ಭೋಪಾಲ್‌, ಪಟ್ನಾ, ದಿಲ್ಲಿಯ ಕೆಲವು ಪ್ರದೇಶಗಳು ಸೇರಿದಂತೆ ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿನ ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು, ನಗದು ಕೊರತೆ ಉದ್ಬವಿಸಿದೆ; ಸಾಮಾನ್ಯ ಆರ್ಥಿಕ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಗಳು ತಿಳಿಸಿದೆ.

ಮಂಗಳವಾರ ಬೆಳಗ್ಗಿನಿಂದಲೇ ದೇಶದ ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿ ಜನರು ಎಟಿಎಂ ಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಅನೇಕ ಎಟಿಎಂಗಳ ಮುಂದೆ “ನೋ ಕ್ಯಾಶ್‌’ ಎಂಬ ಫ‌ಲಕವನ್ನು ತೂಗು ಹಾಕಲಾಗಿರುವುದು ಕಂಡು ಬಂದಿದೆ. ಇನ್ನೂ ಅನೇಕ ಎಟಿಎಂಗಳು ತಾಂತ್ರಿಕ ಕಾರಣಗಳಿಂದಾಗಿ ಮುಚ್ಚಿವೆ.

ಜನರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಗದಿಗಾಗಿ ಮುಗಿ ಬೀಳುವಾಗ ಅದನ್ನು ನಿಭಾಯಿಸುವ ಮೂಲ ಸೌಕರ್ಯ ಬ್ಯಾಂಕುಗಳಲ್ಲಿ  ಇಲ್ಲ ಎಂದು ಅನೇಕ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ನಡುವೆ ಕೇಂದ್ರ ಹಣಕಾಸು ಸಹಾಯಕ ಸಚಿವ  ಎಸ್‌ ಪಿ ಶುಕ್ಲಾ ಅವರು “ಈಗ ಈ ಹೊತ್ತಿನಲ್ಲಿ ನಮ್ಮ ಬಳಿಕ 1,25,000 ಕೋಟಿ ನಗದು ಲಭ್ಯತೆ ಇದೆ. ಈಗ ವಿಷಯವೇನೆಂದರೆ ಕೆಲವು ರಾಜ್ಯಗಳಲ್ಲಿ ಅತ್ಯಧಿಕ ನಗದು ಇದೆ; ಕೆಲವು ರಾಜ್ಯಗಳಲ್ಲಿ ನಗದು ಕೊರತೆ ಇದೆ. ಆದುದರಿಂದ ಸರಕಾರ ರಾಜ್ಯ ವಾರ ಸಮಿತಿಯನ್ನು ರೂಪಿಸಿದೆ; ಆರ್‌ಬಿಐ ಕೂಡ ಸಮಿತಿಗಳನ್ನು ರಚಿಸಿದೆ. ಇವುಗಳ ಮೂಲಕ ನಗದು ಇಲ್ಲದ ರಾಜ್ಯಗಳಿಗೆ ನಗದು ಪೂರೈಸುವ ಕೆಲಸ ಆರಂಭಿಸಲಾಗಿದೆ; ಇನ್ನು ಮೂರು ದಿನಗಳ ಒಳಗೆ ದೇಶಾದ್ಯಂತ ನಗದು ಲಭ್ಯತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ’ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ