ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕು:

ರಾಯಚೂರು,ಏ.8- ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅಳಿಯ, ಮಾವ ಸ್ಪರ್ಧಿಸುವ ಮೂಲಕ ಗಮನ ಸೆಳೆಯುವಂತಾಗಿದೆ.
ದೇವದುರ್ಗ ಕ್ಷೇತ್ರದಲ್ಲಿ ದಶಕಗಳಿಂದ ಕುಟುಂಬ ರಾಜಕಾರಣದ ಪ್ರಾಬಲ್ಯವೇ ಇದ್ದು, ಮೀಸಲು ಕ್ಷೇತ್ರವಾಗುವ ಮುನ್ನ ವಲಸೆ ನಾಯಕರಿಗೆ ಜಯಮಾಲೆ ಹಾಕುತ್ತಿದ್ದ ಮತದರ ಪ್ರಭುಗಳು, ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳಿಕ ಕುಟುಂಬ ರಾಜಕಾರಣಕ್ಕೆ ಮತ ನೀಡುತ್ತಿದ್ದಾರೆ.
ಹಿನ್ನೆಲೆ:
ಕಾಂಗ್ರೆಸ್‍ನ ಮಾಜಿ ಸಂಸದ ಹಾಗೂ ಶಾಸಕ ಎ.ವೆಂಕಟೇಶ್‍ನಾಯ್ಕ ಅವರ ಅಕಾಲಿಕ ಮರಣದ ನಂತರ 2016ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೆ.ಶಿವನಗೌಡನಾಯ್ಕ ಜಯಗಳಿಸಿದ್ದರು.
ಆದರೆ, ಇದಕ್ಕೂ ಮುನ್ನ ನಡೆದಿದ್ದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಾತಾ ವೆಂಕಟೇಶನಾಯ್ಕ, ಮಾವ ಬಿ.ವಿ.ನಾಯ್ಕ ವಿರುದ್ಧ ಕೆ.ಶಿವನಗೌಡ ನಾಯ್ಕ ಸೋಲು ಕಂಡಿದ್ದರು. ಹೀಗಾಗಿ ದೇವದುರ್ಗ ಕ್ಷೇತ್ರದಲ್ಲಿ ಅಳಿಯ, ಮಾವನ ನಡುವೆಯೇ ಪೈಪೆÇೀಟಿ ಏರ್ಪಡುತ್ತಿದೆ.
ಈ ಬಾರಿಯ ಚುನಾವಣೆಯಲ್ಲೂ ಬಿ.ವಿ.ನಾಯ್ಕ ಇಲ್ಲವೇ ಅವರ ಪತ್ನಿ ನಿಲ್ಲುತ್ತಾರೆ ಎಂಬ ವಿಷಯ ಕೇಳಿ ಬಂದಿತ್ತು. ವೆಂಕಟೇಶನಾಯ್ಕರ ಮಗಳ ಮಗ ಶ್ರೀನಿವಾಸ್‍ನಾಯ್ಕ ಕೂಡ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.
ಈ ನಡುವೆ ಅದೇ ಕುಟುಂಬದ ಜಿಪಂ ಮಾಜಿ ಸದಸ್ಯ ವೆಂಕಟೇಶ ಪೂಜಾರಿ ಜೆಡಿಎಸ್ ಟಿಕೆಟ್‍ಗಾಗಿ ಪೈಪೆÇೀಟಿ ನಡೆಸಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಮೂರು ಪ್ರಮುಖ ಪಕ್ಷಗಳಿಂದ ಒಂದೇ ಕುಟುಂಬದವರು ಸ್ಪರ್ಧಿಸುತ್ತಿದ್ದು, ಮತದಾರರಿಗೆ ಪರ್ಯಾಯ ಆಯ್ಕೆ ಇಲ್ಲದಂತಾಗಿದೆ.
ಕೆ.ಶಿವನಗೌಡ ನಾಯ್ಕಗೆ ಬಿಜೆಪಿಯ ಟಿಕೆಟ್ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಶಿವನಗೌಡ ನಾಯ್ಕ ಅವರ ಮಾವ ವೆಂಕಟೇಶ್‍ಪೂಜಾರಿ ಈಗಾಗಲೇ ಜೆಡಿಎಸ್‍ನಿಂದ ಟಿಕೆಟ್ ಪಡೆದು ಪ್ರಚಾರ ಆರಂಭಿಸಿದ್ದಾರೆ.
ಇವರಿಬ್ಬರ ನಡುವೆ ಕಾಂಗ್ರೆಸ್‍ನಿಂದ ಎ.ವೆಂಕಟೇಶನಾಯ್ಕ ಮಕ್ಕಳಾದ ಬಿ.ವಿ.ನಾಯ್ಕ, ಎ.ರಾಜಶೇಖರನಾಯ್ಕ ಹಾಗೂ ಶ್ರೀನಿವಾಸನಾಯ್ಕರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಒಟ್ಟಾರೆ ಪ್ರಮುಖ ಮೂರು ಪಕ್ಷಗಳು ಒಂದೇ ಕುಟುಂಬದವರಿಗೆ ಟಿಕೆಟ್ ನೀಡಿದರೆ ದೇವದುರ್ಗ ಕ್ಷೇತ್ರದ ರಾಜಕೀಯ ಕದನದಲ್ಲಿ ಅಳಿಯ-ಮಾವನ ನಡುವೆ ಸ್ಪರ್ಧೆ ಏರ್ಪಟ್ಟು ಕುತೂಹಲ ಕೆರಳಿಸುವುದಂತೂ ಸತ್ಯ.
ಸ್ಪರ್ಧಿಗಳಲ್ಲಿ ಯಾರನ್ನು ಮತದಾರರು ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ