ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ವರುಣಾ ಕ್ಷೇತ್ರದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳ ಪುತ್ರರ ಕಾದಾಟಕ್ಕೆ ವೇದಿಕೆ ಸಿದ್ಧ:

ಮೈಸೂರು, ಏ.8-ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ವರುಣಾ ಕ್ಷೇತ್ರದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳ ಪುತ್ರರ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶತಾಯಗತಾಯ ಗೆಲ್ಲಲೇಬೇಕೆಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಎರಡು ವಾರಗಳಿಂದ ಒಕ್ಕಲಿಗ, ಕುರುಬ ಮುಖಂಡರ ಸಭೆ ನಡೆಸುತ್ತಾ ಹಗಲು-ರಾತ್ರಿ ಮತಯಾಚನೆ ಮಾಡುತ್ತಿದ್ದಾರೆ.
ತಮ್ಮ ಪುತ್ರ ವೈದ್ಯ ಡಾ.ಯತೀಂದ್ರನನ್ನು ರಾಜಕೀಯಕ್ಕೆ ತಂದು ವರುಣಾದಲ್ಲಿ ಕಣಕ್ಕಿಳಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರನನ್ನು ಕಣಕ್ಕಿಳಿಸಲು ಇಚ್ಛಿಸಿದ್ದು ಟಿಕೆಟ್ ಸಿಗುವುದು ಖಚಿತವಾಗುತ್ತಿದ್ದಂತೆ ವಿಜಯೇಂದ್ರ ಕ್ಷೇತ್ರಕ್ಕೆ ಭೇಟಿ ನೀಡಿ ಮತಪ್ರಚಾರದಲ್ಲಿ ತೊಡಗಿದ್ದಾರೆ. ಇಂದು ಬೆಳಿಗ್ಗೆ ರಾಜೇಂದ್ರ ಭವನದಲ್ಲಿ ವರುಣಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಲಿಂಗಾಯತ ಮುಖಂಡರೊಂದಿಗೆ ಸಭೆ ನಡೆಸಿದರು. ನಂತರ ಕವಲಂದೆ, ತಗಡೂರು, ಹಾರೋಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಓಲೈಕೆಗೆ ಮುಂದಾದರು.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ರೇವಣಸಿದ್ದಯ್ಯ ಅವರನ್ನು ಭೇಟಿ ಮಾಡಿ ವಿಜಯೇಂದ್ರ ಮಾತುಕತೆ ನಡೆಸಿದರು. ಮಂಗಳವಾರ ಅಥವಾ ಬುಧವಾರ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ