ಬಡವರಿಗೆ ಉಚಿತ ಆರೋಗ್ಯ ಚಿಕಿತ್ಸೆ: ಕುಮಾರ ರಕ್ಷಾ ಜನಸೇವಾ ವಾಹನಕ್ಕೆ ಹೆಚ್ ಡಿಕೆ ಚಾಲನೆ

ಬೆಂಗಳೂರು:ಫೆ-21: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೆಸರಲ್ಲಿ ಮತ್ತೊಂದು ಜನಪರ ಯೋಜನೆ ಜಾರಿಗೊಂಡಿದೆ. ರಾಜ್ಯದ ಬಡ ಜನರಿಗೆ ಆರೋಗ್ಯ ಚಿಕಿತ್ಸೆ ಹಿನ್ನಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕುಮಾರ ರಕ್ಷಾ ಜನಸೇವಾ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ವಾಹನಕ್ಕೆ ಹೆಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು.

ಉದ್ಯಮಿ ಮತ್ತು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಉಮೇಶ್ ಕುಮಾರ್ ಅವರ ಮಹತ್ವಾಕಾಂಕ್ಷಿ ಈ ಯೋಜನೆಗೆ ಜೆಡಿಎಸ್ ಕಛೇರಿಯಲ್ಲಿ ಕುಮಾರಸ್ವಾಮಿ ಚಾಲನೆ ನೀಡಿ ಮಾತನಾಡಿ, ಜೆಡಿಎಸ್ ಸದಾ ಬಡವರು, ದೀನದಲಿತರ ಏಳ್ಗೆಗಾಗಿ ದುಡಿಯುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತಾದರ್ಶನಕ್ಕೆ ಬರುತ್ತಿದ್ದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಾವಿರಾರು ಬಡವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸರ್ಕಾರ ಮತ್ತು ಪಕ್ಷದ ವತಿಯಿಂದ ನೆರವಾಗಿದ್ದೇವೆ. ಇದನ್ನು ನಮ್ಮ ಬಡಜನರು ಮರೆತಿಲ್ಲ ಎಂದು ಹೇಳಿದರು.

ಅಧಿಕಾರ ಇರಲಿ ಇಲ್ಲದಿರಲಿ ಬಡಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವುದೇ ಮಾನವೀಯತೆ ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ನಾವು ಮತ್ತು ನಮ್ಮ ಪಕ್ಷ ಇನ್ನೂ ಹೆಚ್ಚು ಮಾಡುವ ಮೂಲಕ ಬಡ ವರ್ಗದ ಜನರ ನೆರವಿಗೆ ಧಾವಿಸಬೇಕಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ್ ಕುಮಾರ್, ಕುಮಾರಸ್ವಾಮಿಯವರ ಜನಪರ ಕಾಳಜಿ ನನಗೆ ಸ್ಪೂರ್ತಿ. ಅವರ ಅಭಿಮಾನಿಯಾದ ನಾನು ಜನಸೇವೆಯಲ್ಲಿ ತುಂಬಾ ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ದೈನಂದಿನ ಬದುಕಿನಲ್ಲಿ ಏನಾದರೂ ಸಹಾಯವಾಗುವಂತಹ ಕೆಲಸ ಮಾಡಬೇಕು ನಿರ್ಧರಿಸಿದಾಗ ಹೊಳೆದ ಯೋಜನೆಯೇ ಈ ಕುಮಾರ ರಕ್ಷಾ ಯೋಜನೆ ಎಂದು ಹೇಳಿದರು.

ಕುಮಾರ ರಕ್ಷಾ ಜನಸೇವಾ ವಾಹನದಲ್ಲಿ ಓರ್ವ ವೈದ್ಯ, ಓರ್ವ ಪುರುಷ ನರ್ಸ್, ಓರ್ವ ಮಹಿಳಾ ನರ್ಸ್ ಗಳಿರಲಿದ್ದಾರೆ ಎಂದು ಮಾಹಿತಿ ನೀಡಿದರು.

H D Kumaraswami,JDS,kumara raksha janaseva yojana

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ