ಬೆಂಗಳೂರು: ನಿರ್ಭಯಾ ಯೋಜನೆಯಡಿ 667 ಕೋಟಿ ಮೊತ್ತದ ಸೇಫ್ ಸಿಟಿ ಯೋಜನೆಯ ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಇದರಲ್ಲಿ ಗೊಂದಲ ಇರಲ್ಲ ಎಂದು ಸೇಫ್ ಸಿಟಿ ಪ್ರಾಜೆಕ್ಟ್ನ ಟೆಂಡರ್ ಆಹ್ವಾನಿತ ಪ್ರಾಕಾರದ ಅಧ್ಯಕ್ಷ ಹೇಮಂತ್ ನಿಂಬಾಳ್ಕರ್ ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಕ್ಷತಾ ನಗರ ಯೋಜನೆಯ ಟೆಂಡರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳಲ್ಲಿ ಹುರುಳಿಲ್ಲ. ಸಾಕ್ಷ್ಯಾಧಾರವಿಲ್ಲದೆ ಕೆಲವೊಂದು ವಿಚಾರಗಳು ಪ್ರಸ್ತಾಪವಾಗಿದೆ. ನಾನು ಈ ಸಂಬಂಧ ಡಿ.7ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಅದು ತನಿಖಾ ಹಂತದಲ್ಲಿ ಇರುವಾಗ ಹೆಚ್ಚು ಮಾತನಾಡುವುದಿಲ್ಲ. ಅಲ್ಲದೆ ತಮ್ಮ ಬಗ್ಗೆ ಇರುವ ವೈಯಕ್ತಿಕ ಆಪಾದನೆಗಳ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುರಕ್ಷತಾ ನಗರ ಯೋಜನೆಗೆ ಸಂಬಂಸಿದಂತೆ 3ನೇ ಟೆಂಡರ್ ಕರೆಯಲಾಗಿದ್ದು, ಆ ಟೆಂಡರ್ಗೆ ಬಿಡ್ ಮಾಡಲು ಜ.8ರವರೆಗೂ ಕಾಲಾವಕಾಶವಿದೆ. ನಂತರ ಜ.11ಕ್ಕೆ ಬಿಡ್ದಾರರ ಪೂರ್ವಾರ್ಹತೆ ಮತ್ತು ತಾಂತ್ರಿಕ ಅರ್ಹತೆಯ ಪರಿಶೀಲನೆಯಾಗುತ್ತದೆ. ಆನಂತರ ಹಣಕಾಸು ಬಿಡ್ ತೆರೆಯಲಾಗುತ್ತದೆ. ತಾಂತ್ರಿಕ ಅರ್ಹತೆ ಪಡೆಯುವ ಮತ್ತು ಕಡಿಮೆ ದರ ನಮೂದಿಸುವವರಿಗೆ ಬಿಡ್ ಆಗುತ್ತದೆ. ಇದು ಟೆಂಡರ್ನ ಪ್ರಕ್ರಿಯೆ ಎಂದು ವಿವರಿಸಿದರು.
ಮೊದಲ ಟೆಂಡರ್ನಲ್ಲಿ ಬಿಇಎಲ್ ಇರಲಿಲ್ಲ: ಮೊದಲ ಬಾರಿ ಟೆಂಡರ್ ಕರೆದಾಗ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(ಬಿಇಎಲ್) ಬಿಡ್ನಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಉಳಿದ ಮೂರು ಜನ ಬಿಡ್ದಾರರು ಪೂರ್ವಾರ್ಹತೆ ಮತ್ತು ತಾಂತ್ರಿಕ ಅರ್ಹತೆಗೆ ಮುಂಚೆಯೇ ಅನರ್ಹಗೊಂಡಿದ್ದಾರೆ. ಹೀಗಾಗಿ 2ನೇ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಬಿಇಎಲ್, ಎಲ್ ಅಂಡ್ ಟಿ, ಮ್ಯಾಟ್ರಿಕ್ಸ್, ಸೆಕ್ಯೂರಿಟಿ ಮತ್ತು ಸರ್ವಲೆ ಪ್ರೈವೇಟ್ ಲಿಮಿಟೆಡ್ ಬಿಡ್ಗಳು ಸ್ವೀಕಾರವಾಗಿದ್ದವು. ಅದರಲ್ಲಿ ಬಿಇಎಲ್ ಅನರ್ಹಗೊಂಡಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಚೈನಾ ಉಪಕರಣಗಳನ್ನು ಬಳಸಬಾರದೆಂದಿದೆ. ಹಾಗಾಗಿ 2ನೇ ತಂಡ ಕೂಡ ರದ್ದಾಯಿತು. ನ.11ರಂದು 3ನೇ ಟೆಂಡರ್ ಕರೆಯಲಾಗಿದ್ದು, ಬಿಡ್ ಸಲ್ಲಿಕೆಗೆ ಜ.8ರವರೆಗೂ ಕಾಲಾವಕಾಶವಿದೆ. ಟೆಂಡರ್ ಸಮಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಿಬಿಎಂಪಿ, ಇ-ಆಡಳಿತದ ಅಕಾರಿಗಳು ಇರುತ್ತಾರೆ. ಟೆಂಡರ್ನ ಪೂರ್ವ ಅರ್ಹತೆ ಮತ್ತು ತಾಂತ್ರಿಕ ಅರ್ಹತೆ ನಂತರ ಬೆಂಗಳೂರು ನಗರದ ಸುರಕ್ಷತೆ ಕುರಿತಂತೆ 48 ಗಂಟೆಗಳ ಕಾಲ ಲೈವ್ ಡೆಮೊಸ್ಟ್ರೇಷನ್ ಆಗಬೇಕು. ಆನಂತರ ಹಣಕಾಸು ಟೆಂಡರ್ ಕರೆಯಲಾಗುತ್ತದೆ ಎಂದರು.
ಈ ಟೆಂಡರ್ನಲ್ಲಿ ಮೂರು ಹಂತದ ಸಮಿತಿಗಳಿವೆ: ಮಹಿಳೆಯರ ಸುರಕ್ಷತೆಗೆ ಸೇಫ್ ಲ್ಯಾಂಡಿಂಗ್ ವ್ಯವಸ್ಥೆಯಿದ್ದು, ಅದು ಅತ್ಯಂತ ಕ್ಲಿಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನ ಅತ್ಯಾಧುನಿಕ ವಿಡಿಯೋ ಅನೆಲಿಟಿಕ್ ವ್ಯವಸ್ಥೆ ಬರಲಿದೆ. ಈ ಟೆಂಡರ್ನಲ್ಲಿ ಮೂರು ಹಂತದ ಸಮಿತಿಗಳಿವೆ. ಟೆಂಡರ್ ಆಹ್ವಾನಿಸುವ ಸಮಿತಿ, ಟೆಂಡರ್ ಪರಿಶೀಲನಾ ಸಮಿತಿ ಹಾಗೂ ಉನ್ನತಮಟ್ಟದ ಸಮಿತಿಯು ಇರುತ್ತದೆ. ನಾನು ಪತ್ರ ಬರೆದ ನಂತರ ಟೆಂಡರ್ ಬಗ್ಗೆ ಹಲವಾರು ಊಹಾಪೊಹಗಳು ಬಂದಿವೆ. ಬಹುನಿರೀಕ್ಷಿತ ಟೆಂಡರ್ ಇದಾಗಿದ್ದು,ದೇಶದ ಮೊದಲ ಬಾರಿಗೆ ಟೆಂಡರ್ ಆಗುತ್ತಿದೆ. ಈ ಯೋಜನೆಯ ಟೆಂಡರ್ ಸಲಹೆಗಾರರನ್ನು ಕಿಯೋನಿ ಸಂಸ್ಥೆಯು ಟೆಂಡರ್ ಕರೆದು ಆಯ್ಕೆ ಮಾಡಿದೆ ಎಂದರು.