ಬೆಂಗಳೂರು: ನಿವಾರ್ ಚಂಡಮಾರುತದ ಪರಿಣಾಮವಾಗಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಎರಡು ದಿನ ಮಳೆಯಾಗಲಿದೆ.
ಬೆಂಗಳೂರು ನಗರ ಹಾಗೂ ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ನಗರದಲ್ಲಿ ಬೆಳಗಿನಿಂದಲೂ ಮಳೆಯಾದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿಯಲಿಲ್ಲ . ಅಂಗಡಿ-ಮುಂಗಟ್ಟು ಮುಚ್ಚಿದ್ದರಿಂದ ವ್ಯಾಪಾರ-ವಹಿವಾಟು ಮಂದಗತಿಯಲ್ಲಿತ್ತು.
ದಕ್ಷಿಣ ಒಳನಾಡಿನಲ್ಲಿ ಹಲವು ಭಾಗಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಒಣ ಹವೆ ಮುಂದುವರಿದಿದೆ. ನಿವಾರ್ ಚಂಡಮಾರುತ ತಮಿಳುನಾಡಿನ ಪುದುಚೇರಿ ದಾಟಿದ್ದು ವಾಯುವ್ಯ ಭಾಗಕ್ಕೆ ಚಲಿಸಿರುವ ಪರಿಣಾಮ ಚಂಡಮಾರುತ ದುರ್ಬಲಗೊಂಡಿದೆ.
ನ.27ರಿಂದ 29ರವರೆಗೆ ಕೆಲವು ಭಾಗಗಳಲ್ಲಿ ಮಳೆಯಾಗಲಿದ್ದು, 27ರಂದು ಉತ್ತರ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 6.5 ಮಿ.ಮೀ, ಹಳೇ ವಿಮಾನ ನಿಲ್ದಾಣ ಭಾಗದಲ್ಲಿ 13.8 ಮಿ.ಮೀ, ದೇವನಹಳ್ಳಿಯಲ್ಲಿ 14.4 ಮಿ.ಮೀ ಮಳೆಯಾಗಿದೆ.