ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹು ಉದ್ದೇಶಿತ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ರೂ.4,000 ಕೋಟಿಯ ಯೋಜನೆಯನ್ನು ಸಿದ್ಧ ಪಡಿಸಲಾಗಿದೆ. ಪಶ್ಚಿಮ ವಾಹಿನಿಯಲ್ಲಿ ಯೋಜನೆ ರೂಪಿಸಲಾಗಿದ್ದು, ಪ್ರಸ್ತಾವನೆಯನ್ನು ಅನುಮೋದನೆಗಾಗಿ ಶೀಘ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಅವರು ಮಂಗಳವಾರ ಹರೇಕಳ ಬಳಿ ನೇತ್ರಾವತಿ ನದಿಗೆ ಪಶ್ಚಿಮ ವಾಹಿನಿಯ ಅಡಿಯಲ್ಲಿ ನಿರ್ಮಿಸುತ್ತಿರುವ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆಯಲ್ಲಿ ಮಾತನಾಡುತ್ತಿದ್ದರು.
ಪಶ್ಚಿಮ ವಾಹಿನಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 1,076 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇವುಗಳಿಗಾಗಿ ರೂ.2,900 ಕೋಟಿ ವ್ಯಯಿಸಲು ಪ್ರಸ್ತಾವನೆ ಸಿದ್ಧ ಪಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ರೂ.1,000 ಕೋಟಿ ವೆಚ್ಚದಲ್ಲಿ ಬಹು ಉದ್ದೇಶಿತ ಕಿಂಡಿ ಅಣೆಕಟ್ಟುಗಳನ್ನು ಪಶ್ಚಿಮ ವಾಹಿನಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವುದು, ಕುಡಿಯುವ ನೀರು ಪೂರೈಕೆ ಮತ್ತು ಅಂತರ್ಜಲ ವೃದ್ಧಿಗಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ನದಿಗಳಲ್ಲದೆ ಸಣ್ಣ ಸಣ್ಣ ಹೊಳೆಗಳಿಗೂ ಕಿಂಡಿ ಅಣೆಕಟ್ಟುನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ನೀರು ಶೇಖರಣೆಯನ್ನು ಮಾತ್ರ ಮಾಡುತ್ತದೆ. ಕುಡಿಯುವ ನೀರು ಮತ್ತು ಕೃಷಿಗೆ ಬಳಕೆ ಮಾಡುವ ಕಾರ್ಯತಂತ್ರ ಮತ್ತು ಯೋಜನೆಯನ್ನು ಸಂಬಂಧ ಪಟ್ಟ ಇಲಾಖೆಗಳು ರೂಪಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟ ಪಡಿಸಿದರು.