ಬೆಂಗಳೂರು: ಹುಲಿ ಯೋಜನೆಯಿಂದ ಭದ್ರಾ ಹಾಗೂ ಕುದುರೆಮುಖ ಅರಣ್ಯ ವ್ಯಾಪ್ತಿಯ ವಿಸ್ತೃತ ಪ್ರದೇಶವನ್ನು ಕೈಬಿಡಬೇಕು ಹಾಗೂ ಪರಿಸರ ಸೂಕ್ಷ್ಮ ವಲಯ(ಎಸ್‍ಇಝಡ್)ವನ್ನು ನದಿಗೆ ಸೀಮಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲು ಅಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ಗುರುವಾರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ಭಾಗದ ಜನಪ್ರತಿನಿಗಳು ಮನವಿ ಸಲ್ಲಿಸಿ, ಬೇಡಿಕೆ ಈಡೇರಿಸುವಂತೆ ಒತ್ತಡ ಹಾಕಿದರು. ಹಾಗೊಂದು ವೇಳೆ ಆಗದ್ದಿದ್ದರೆ ಮಲೆನಾಡು ಭಾಗದ ಜನರ ಜೀವನ ದುಸ್ತರವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 2011 ರಲ್ಲಿ ಕರ್ನಾಟಕದಲ್ಲಿ 7 ಹುಲಿ ಸಂರಕ್ಷಿತ ಪ್ರದೇಶಗಳನ್ನು ಗುರುತಿಸಿದ್ದು, ಈ ಪೈಕಿ ಭದ್ರಾ ಮತ್ತು ಕುದುರುಮುಖ ಅರಣ್ಯ ವಲಯವನ್ನು ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಿಂದ ಕೈಬಿಡಲು ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮನವಿ ಮಾಡಲಾಗಿತ್ತು. ಅದರಂತೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗಿತ್ತು. ಆದರೀಗ ಇದನ್ನೂ ಹುಲಿ ಯೋಜನೆಯಡಿ ತರಲಾಗಿದ್ದು, ಇದರ ವ್ಯಾಪ್ತಿಯಿಂದ 1- 12 ಕಿ.ಮೀ.ವರೆಗೆ ಪರಿಸರ ಸೂಕ್ಷ್ಮ ವಲಯ ಘೋಷಣೆಯಾಗಿದೆ. ಇದರಿಂದ ಜನರು ಬೆಳೆ ಬೆಳೆಯುತ್ತಿರುವ ಕೃಷಿ ಭೂಮಿ, ವಾಸವಿರುವ ಪ್ರದೇಶಗಳೂ ನಷ್ಟವಾಗಲಿವೆ. ರೈತರು ಕಂಗಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ಮಾಡಿದ ಎಡವಟ್ಟು
ಸಚಿವ ಸಿ.ಟಿ. ರವಿ ಮಾತನಾಡಿ, ಈ ಹಿಂದೆಯೇ ಭದ್ರಾ ಹಾಗೂ ಕುದುರೆಮುಖ ಅರಣ್ಯ ವ್ಯಾಪ್ತಿಯ ಬಹುಪಾಲು ಪ್ರದೇಶಗಳನ್ನು ಹುಲಿ ಯೋಜನೆಗೆ ಸೇರಿಸಿಕೊಳ್ಳಲಾಗಿದೆ. ಸಾಲದ್ದಕ್ಕೆ ಗಾಜನೂರು, ಭದ್ರಾ ಜಲಾಶಯವೂ ಸಂರಕ್ಷಿತ ಪ್ರದೇಶದಲ್ಲಿದ್ದು, ಎಲ್ಲವನ್ನೂ ಬಫರ್ ವಲಯವನ್ನಾಗಿಸಿದರೆ ಜನರು ಬದುಕುವುದು ಕಷ್ಟವಾಗುತ್ತಿದೆ. 2011 ರಲ್ಲಿ ಬಂಡೀಪುರ, ಬಿಳಿರಂಗನಬೆಟ್ಟ, ನಾಗರಹೊಳೆ, ಭದ್ರಾ, ದಾಂಡೇಲಿ ಅಣಶಿ (ಕಾಳಿ) ಹುಲಿ ಸಂರಕ್ಷಿತ ಪ್ರದೇಶಗಳನ್ನು ಅಸೂಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಈ ಪೈಕಿ ಭದ್ರಾ ಹಾಗೂ ಕುದುರೆಮುಖ ಪ್ರದೇಶವನ್ನು ಕೈಬಿಡಲು ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರವೂ ಈ ಬಗ್ಗೆ ಸ್ಪಷ್ಟನೆ ಕೇಳಿತ್ತು. 2016 ರಲ್ಲಿ ಸಚಿವರಾಗಿದ್ದ ರಮಾನಾಥರೈ, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟ ಉಪಸಮಿತಿ ಸರಿಯಾದ ಕ್ರಮ ವಹಿಸಲಿಲ್ಲ. ಸಾಲದ್ದಕ್ಕೆ 2019 ರ ಜೂನ್ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರವು ವ್ಯತಿರಿಕ್ತ ಸ್ಪಷ್ಟನೆ ನೀಡಿದ್ದರ ಪರಿಣಾಮ, ಕೇಂದ್ರ ಸರ್ಕಾರವೀಗ ಹುಲಿ ಯೋಜನೆಯಡಿ ಸೇರಿಸಿಕೊಂಡಿದ್ದು, ಇದರ ವ್ಯಾಪ್ತಿಯಿಂದ 12 ಕಿ.ಮೀ.ವರೆಗೆ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲು ಅಸೂಚಿಸಿಬಿಟ್ಟಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ವನ್ಯಜೀವಿ ಮಂಡಳಿ ಸಭೆಯ ಮುಂದೆ ಈ ವಿಷಯವನ್ನು ಮಂಡನೆ ಮಾಡುವಂತೆ ಅಕಾರಿಗಳಿಗೆ ಸೂಚಿಸಿದರಲ್ಲದೆ, ಸ್ಥಳೀಯ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಸಬೇಕು. ಸಾಧ್ಯವಿದ್ದರೆ, ನಾವೂ ನಿಯೋಗ ಕೊಂಡೊಯ್ದು ಅರ್ಥ ಮಾಡಿಸುತ್ತೇವೆ ಎಂದು ಹೇಳಿದರು.