ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಕಂಡರಿಯದ ಮಳೆಯಿಂದಾಗಿರುವ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಶಿಫಾರಸು ಸಲ್ಲಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಶುಕ್ರವಾರ ಜಿಲ್ಲೆಯ ಪ್ರವಾಹ ಹಾಗೂ ಅತಿವೃಷ್ಟಿ ಹಾನಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಹಿಂದೆಂದೂ ಆಗದಿರುವುದಷ್ಟು ಮಳೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ಸೂಕ್ತ ಪರಿಹಾರೋಪಾಯ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರಕ್ಕೆ ಒತ್ತಾಯಿಸುವುದರ ಜೊತೆಗೆ ಕಳೆದ ವರ್ಷ ಬೆಳಗಾವಿಯಲ್ಲಿ ಆದ ಅತಿವೃಷ್ಟಿಯನ್ನು ವಿಶೇಷ ಎಂಬುದಾಗಿ ಪರಿಗಣಿಸಲಾಗುವುದು ಎಂದು ವಿವರಣೆ ನೀಡಿದರು.
ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ವೀಕ್ಷಿಸಿದ ನಂತರ ಹಾನಿಯ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸೂಕ್ತ ಪರಿಹಾರ ಕ್ರಮಕ್ಕೆ ಮುಂದಾಗಲಾಗುವುದು. ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಕಾರಿಗಳ ಬಳಿ ಪಿಡಿ ಖಾತೆಯಲ್ಲಿ ಹಣವಿದೆ. ಪರಿಹಾರ ಕ್ರಮಗಳಿಗೆ ಹಣದ ಕೊರತೆಯಿಲ್ಲ ಎಂದರು.
ಸಮೀಕ್ಷೆಗೆ ಸೂಚನೆ
ಪ್ರವಾಹ ಹಾನಿ ಜೊತೆಗೆ ಅತಿವೃಷ್ಟಿಯಿಂದಾಗಿರುವ ಬೆಳೆ ಹಾನಿ ಸಮೀಕ್ಷೆ ಮಾಡುವಂತೆ ಸೂಚನೆ ನೀಡಲಾಗಿದೆ. ಬಹು ಮುಖ್ಯವಾಗಿ ಕೇಂದ್ರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದಿಂದ ನೆರವು ಕಲ್ಪಿಸಲಾಗುವುದು. ಈಗಾಗಲೇ ರಾಜ್ಯದ 173 ತಾಲೂಕುಗಳನ್ನು ಅತಿವೃಷ್ಟಿ ಎಂಬುದಾಗಿ ಘೋಷಿಸಲಾಗಿದೆ.
11000 ಮನೆಗಳು ಬಿದ್ದಿವೆ, 360 ಕೆರೆಗಳು ಒಡೆದಿವೆ. 3158 ಸರ್ಕಾರಿ ಕಟ್ಟಡಗಳಿಗೆ ಹಾಗೂ 1268 ಸೇತುವೆಗಳು ಹಾನಿಯಾಗಿವೆ ಎಂದು ಕಂದಾಯ ಸಚಿವರು ತಿಳಿಸಿದರು.
ಸೋಮಾರಿ ಅಕಾರಿಗಳಿಗೆ ಎತ್ತಂಗಡಿ
ಅತಿವೃಷ್ಟಿ ಹಾನಿಯ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ಸೋಮಾರಿ ತೋರುವ ಅಕಾರಿಗಳಿಗೆ ಎತ್ತಂಗಡಿ ಶಿಕ್ಷೆ ನೀಡಲಾಗುವುದು ಎಂದರು.
ಬೆಳೆವಿಮೆ
ಕಳೆದ ವರ್ಷದ ಬೆಳೆಹಾನಿಗೆ ಬೆಳೆವಿಮೆ ಪರಿಹಾರ ವಾರದೊಳಗೆ ರೈತರ ಖಾತೆಗೆ ಆರ್‍ಟಿಜಿಎಸ್ ಮೂಲಕ ಜಮಾ ಆಗಲಿದೆ. ಈಗಾಗಲೇ ಸಭೆ ನಡೆಸಿ ವಿಮಾ ಕಂಪನಿಗಳಿಗೆ ಕೋರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಡಾ. ಅವಿನಾಶ ಜಾಧವ್, ಸಹಾಯಕ ಆಯುಕ್ತ ರಾಮಚಂದ್ರ ಗಡದ ಸೇರಿದಂತೆ ಮುಂತಾದವರಿದ್ದರು.