ನವದೆಹಲಿ, ಜ.27- ಸಾಲದ ಸುಳಿಗೆ ಸಿಲುಕಿರುವ ಸರ್ಕಾರಿ ಒಡೆತನದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಮಾರಾಟ ಮಾಡುವ ಖಾಸಗಿಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ದೇಶಿಯ ಮತ್ತು ಅಂತಾರಾಷ್ಟ್ರೀಯ ನೂರರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಷೇರುಗಳನ್ನು 100ರಷ್ಟು ಮಾರಾಟ ಮಾಡಲಾಗುವುದು. ಜೊತೆಗೆ ಏರ್ ಇಂಡಿಯಾ ಸ್ಯಾಟ್ಸ್ , ಏರ್ಪೋರ್ಟ್ ಸರ್ವೀಸ್ ಲಿಮಿಟೆಡ್ನ ಶೇ.50ರಷ್ಟು ಷೇರುಗಳನ್ನು ಮಾರಾಟ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾ.17ರೊಳಗೆ ಷೇರುಗಳನ್ನು ಖರೀದಿಸುವವರು ಅರ್ಜಿ ಸಲ್ಲಿಸಬೇಕು. ಮಾ.31ಕ್ಕೆ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.
ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ ಒಟ್ಟಾರೆ 60,074 ಕೋಟಿ ಸಾಲದ ಸುಳಿಗೆ ಸಿಲುಕಿದೆ. ಹರಾಜಿನಲ್ಲಿ ಭಾಗವಹಿಸುವವರು 23,248 ಕೋಟಿಯನ್ನು ಸಾಲದ ವಹಿವಾಟಿನಲ್ಲಿ ಭರಿಸಬೇಕೆಂದು ನಿಯಮದಲ್ಲಿ ತಿಳಿಸಲಾಗಿದೆ.