ಬೆಂಗಳೂರು, ಜ.27-ಮಾರಣಾಂತಿಕ ಕೊರೊನಾ ವೈರಸ್ ಕುರಿತಂತೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಈವರೆಗೂ ವಿಮಾನ ನಿಲ್ದಾಣದ ಮೂಲಕ ಆಗಮಿಸುವ 2572ಕ್ಕೂ ಹೆಚ್ಚು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಜ.21 ರಿಂದಲೇ ತಪಾಸಣಾ ಕಾರ್ಯ ಆರಂಭಿಸಲಾಗಿದೆ. ಪ್ರತಿದಿನ ಕನಿಷ್ಠ 300 ರಿಂದ 400 ಮಂದಿಯನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಈವರೆಗೂ ಸೋಂಕು ತಗುಲಿರುವುದು ಪತ್ತೆಯಾಗಿಲ್ಲ.
3 ದಿನಗಳ ಹಿಂದೆ ಒಬ್ಬ ಪ್ರಯಾಣಿಕರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರಿಶೀಲನೆಯಲ್ಲಿ ಸೋಂಕು ಪತ್ತೆಯಾಗಿಲ್ಲ. ಚೀನಾದಿಂದ ಬಂದ ಇಬ್ಬರು ಪ್ರಯಾಣಿಕರ ಮೇಲೆ ಜ.18 ರಿಂದಲೂ ವೈದ್ಯಕೀಯ ನಿಗಾ ವಹಿಸಲಾಗಿದೆ.
ಕಳೆದ ರಾತ್ರಿ ಈ ಮೂರೂ ಮಂದಿಯ ರಕ್ತ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಚೀನಾ ಪ್ರವಾಸ ಕೈಗೊಂಡು ದೇಶಕ್ಕೆ ವಾಪಸ್ಸಾದ ಇಬ್ಬರು ಭಾರತೀಯರು ಹಾಗೂ ಚೀನಾದ ನಾಲ್ವರು ಪ್ರಜೆಗಳನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲಾಗುತ್ತಿದೆ. ಮುಂದಿನ 28 ದಿನಗಳವರೆಗೂ ಅವರ ಮೇಲೆ ನಿಗಾ ವಹಿಸುವುದನ್ನು ಮುಂದುವರೆಸಲಾಗುವುದು.
ಕೊರೊನಾ ವೈರಸ್ನ ಯಾವುದೇ ಅನುಮಾನ ಕಂಡು ಬಂದರೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುವುದು ಎಂದು ಆರೋಗ್ಯ ಸ್ಪಷ್ಟಪಡಿಸಿದೆ.
ಮುನ್ನೆಚ್ಚರಿಕೆಗೆ ಸೂಚನೆ: ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಮೂಲಕ ಸೂಚನೆ ನೀಡಿದೆ.
ಗಂಟಲನ್ನು ಒಣಗಲು ಅವಕಾಶ ನೀಡಬಾರದು. ಪದೇ ಪದೇ 10 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು. ವಯಸ್ಕರು 50 ರಿಂದ 80 ಡಿಗ್ರಿ ಸೆಲ್ಷಿಯಸ್ ಕಾಯಿಸಿ ಆರಿಸಿದ ಬಿಸಿನೀರನ್ನು, ಮಕ್ಕಳು 30 ರಿಂದ 50 ಡಿಗ್ರಿ ಸೆಲ್ಷಿಯಸ್ನಲ್ಲಿ ಕಾಯಿಸಿದ ನೀರನ್ನು ಕುಡಿಯಬೇಕು. ಗಂಟಲು ಒಣಗಲು ಬಿಟ್ಟರೆ ಕೊರೊನಾ ವೈರಸ್ 10 ನಿಮಿಷದೊಳಗಾಗಿ ದೇಹವನ್ನು ಸೇರುವ ಸಾಧ್ಯತೆ ಇದೆ. ಸದ್ಯಕ್ಕೆ ಭಾರತದಲ್ಲಿ ಈ ವೈರಸ್ ಪತ್ತೆಯಾಗದಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜನನಿಬಿಡ ಪ್ರದೇಶಗಳಿಗೆ ಹೋಗುವಾಗ, ಮೆಟ್ರೋ, ರೈಲು, ಬಸ್ಗಳಲ್ಲಿ ಸಂಚರಿಸುವ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಉಸಿರಾಟದ ಸಮಸ್ಯೆ, ಪದೇ ಪದೇ ಬಿಟ್ಟು ಬರುವ ಜ್ವರಗಳು, ಅನಗತ್ಯವಾದ ತಲೆ ನೋವು ಸೇರಿದಂತೆ ಮತ್ತಿತರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕೆಂದು ಕೇಂದ್ರ ಸರ್ಕಾರ ಸುತ್ತೋಲೆಯಲ್ಲಿ ಸೂಚನೆ ನೀಡಿದೆ.