ಬ್ಯಾಂಕ್‍ನ ತೇಜೋವಧೆ ಮಾಡುವ ದುರುದ್ದೇಶ ಹಿನ್ನಲೆ-ಸತ್ಯಕ್ಕೆ ದೂರವಾಗಿರುವ ಆರೋಪ

ಬೆಂಗಳೂರು,ಜ.27- ಬ್ಯಾಂಕ್‍ನ ಏಳಿಗೆಯನ್ನು ಸಹಿಸದೆ ತೇಜೋವಧೆ ಮಾಡುವ ದುರುದ್ದೇಶದಿಂದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಲಾಗಿದ್ದು, ಠೇವಣಿದಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಜನತಾ ಸೇವಾ ಕೋಆಪರೇಟ್ ಬ್ಯಾಂಕ್‍ನ ಅಧ್ಯಕ್ಷ ರಾಮು ಅವರು, ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿ ವಿಜಯನಗರ, ಬೆಂಗಳೂರು ಇದರ ಮೇಲೆ ಬ್ಯಾಂಕಿನಲ್ಲಿ ಬಹುಕೋಟಿ ಬೇನಾಮಿ ಸಾಲಗಳನ್ನು ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರು 2015ರಿಂದ 2018ರ ಅವಧಿಗೆ ಮೆ. ತಿರುಮಲ ಕನ್‍ಸ್ಟ್ರಕ್ಷನ್ ಮತ್ತು ಇತರೆ ಸಂಸ್ಥೆಗಳಿಗೆ ರೂ. 42 ಕೋಟಿಗಳಷ್ಟು ಸಾಲಗಳನ್ನು ಬೇನಾಮಿಯಾಗಿ ನೀಡಿರುವುದಾಗಿ ಆರ್.ಕುಮಾರ್ ಎಂಬುವರು ದಿನಾಂಕ 24.01.2020 24ನೇ ಅಡಿಷನಲ್ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‍ನಲ್ಲಿ ದಾವೆಯನ್ನು ದಾಖಲಿಸಿದ್ದು, ಬ್ಯಾಂಕಿನ ವಿರುದ್ದ ಆರೋಪವನ್ನು ಮಾಡಿರುತ್ತಾರೆ.

ಕುಮಾರ್ ಮತ್ತು ಪತ್ನಿ ಡಾ. ಮಂಜುಳ ಕುಮಾರ್ ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿಗಳನ್ನು ಆಧಾರವಾಗಿ ಮೆ.ವಿ.ಎನ್. ಕನ್‍ಸ್ಟ್ರಕ್ಷನ್ ಸಂಸ್ಥೆಯವರು ಸಾಲವಾಗಿ ಪಡೆದಿದೆ. ಅವರು ಸಾಲವನ್ನು ಮರುಪಾವತಿಸದೆ ಸುಸ್ತಿದಾರರಾದ ಕಾರಣ ಅವರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ 14-01-2020ರಲ್ಲಿ ಸ್ವಾಧೀನ ನೋಟಿಸ್ ನೀಡಿ ದಿನಪತ್ರಿಕೆಗಳಲ್ಲೂ ಇದರ ಬಗ್ಗೆ ಪ್ರಕಟಣೆ ನೀಡಲಾಗಿತ್ತು.

ಬ್ಯಾಂಕ್‍ನ ಈ ಕ್ರಮವನ್ನು ಸಹಿಸದ ಕುಮಾರ್, ದ್ವೇಷದಿಂದ ಬ್ಯಾಂಕಿನ ವಿರುದ್ದ ಆರೋಪ ಮಾಡಿದ್ದಾರೆ. ಆದರೆ ಬ್ಯಾಂಕ್ ಬೇನಾಮಿ ವ್ಯಕ್ತಿಗಳಿಗೆ ಯಾವುದೇ ಸಾಲ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸುಸ್ತಿದಾರರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಕ್ಕೆ ಸಾಲ ವಸೂಲಾತಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಕ್ಕೆ ತೇಜೋವಧೆ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಹೇಳಿದರು.

1969ರಿಂದಲೂ ಈ ಬ್ಯಾಂಕ್ ರಾಜ್ಯದಲ್ಲಿ ಅತ್ಯಂತ ಕಾರ್ಯಕ್ಷಮತೆ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿರುವ 10 ಬ್ಯಾಂಕುಗಳಲ್ಲಿ 6 ನೇ ಸ್ಥಾನ ಪಡೆದಿದೆ. 16 ಸಾವಿರ ಸದಸ್ಯರಿದ್ದು, ಸದಸ್ಯರ ಹಿತಾಸಕ್ತಿ ಕಾಪಾಡುವ ಹಿನ್ನಲೆಯಲ್ಲಿ ಬ್ಯಾಂಕಿನಲ್ಲಿ ಅತ್ಯಂತ ಕಾನೂನು ಬದ್ದವಾದ ಕ್ರಮಗಳನ್ನು ಅನುಸರಿಸಲಾಗುತ್ತದೆ. ಬ್ಯಾಂಕ್ ಇಷ್ಟು ವೇಗವಾಗಿ ಬೆಳೆಯಲು ಹಾಗೂ ಸುಮಾರು 1300 ಕೋಟಿ ರೂ. ಠೇವಣಿ ಹೊಂದಲು ಕಾರಣ ಬ್ಯಾಂಕಿನ ಸದಸ್ಯರೇ ಆಗಿದ್ದಾರೆ. ಬ್ಯಾಂಕಿನ ಯಾವುದೇ ಠೇವಣಿದಾರರು ಆತಂಕಕ್ಕೆ ಒಳಗಾಗಬಾರದೆಂದು ಅವರು ಮನವಿ ಮಾಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಗೋಪಾಲ್.ಹೆಚ್.ಸಿ, ನಿರ್ದೇಶಕರಾದ ವೆಂಕಟೇಶ್‍ಮೂರ್ತಿ, ಶ್ಯಾಮನೂರು.ಎನ್.ಸಿ, ಜಯರಾಮು. ಕೆ, ಶಿವಲಿಂಗಯ್ಯ, ಕನ್ಯಾ ಕುಮಾರಿ, ಸುಮಿತ್ರಾ, ಜಯರಾಮ್ ಎಂ. ಮರಿಯಪ್ಪ ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಭಾಗ್ಯ.ಎಸ್ ಹಾಗೂ ಮ್ಯಾನೇಜರ್‍ಗಳಾದ ಯೋಗೇಶ್.ಬಿ, ಸೋಮಶೇಖರ್, ಶಂಭಯ್ಯ ,ಗೀತಾ ಸಿ, ವಿದ್ಯಾ.ಎಂ, ಬ್ಯಾಂಕಿನ ವಕೀಲರಾದ ಲೋಕೇಶ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ