ಸಿಎಎ ಮತ್ತು ಎನ್‍ಆರ್‍ಸಿ ಅನುಷ್ಠಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ

ಬೆಂಗಳೂರು, ಡಿ.18- ರಾಷ್ಟ್ರೀಯ ಪೌರತ್ವ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಮಸೂದೆ(ಎನ್‍ಆರ್‍ಸಿ)ಯನ್ನು ವಿರೋಧಿಸುವುದಾಗಿ ಹೇಳಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದೇಶದ ಪ್ರತಿಯೊಬ್ಬ ನಾಗರಿಕರ ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದಂತಹ ದೇಶದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸಂಘರ್ಷವುಂಟು ಮಾಡುವ ವಿಚಾರಗಳಿಗೆ ಒತ್ತು ನೀಡುತ್ತಿದೆ ಎಂದು ಟೀಕಿಸಿದರು.

ರಾಜ್ಯಸಭೆಯಲ್ಲಿ ಎರಡು ವಿಧೇಯಕಗಳ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ವಿರೋಧ ವ್ಯಕ್ತಪಡಿಸುವ ಮೂಲಕ ಪಕ್ಷದ ನಿಲುವನ್ನು ಈಗಾಗಲೇ ತಿಳಿಸಿದ್ದಾರೆ ಎಂದರು.

ಪ್ರಧಾನಿ ಹಲವು ರಾಷ್ಟ್ರಗಳಿಗೆ ಭೇಟಿ ಕೊಟ್ಟು , ಮತ್ತೆ ಹಲವು ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡುವ ಮೂಲಕ ವಿಪಕ್ಷೀಯ ಭಾಂದವ್ಯ ವೃದ್ಧಿಗೆ ಮುಂದಾಗಿದ್ದಾರೆ. ಆದರೆ ನೆರೆ ಹೊರೆಯ ದೇಶಗಳಿಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಹಿಂದೂ ರಕ್ಷಣೆ ಮಾಡಲು ಮುಂದಾಗಿರುವುದಾಗಿ ಬಿಂಬಿಸಿದ್ದಾರೆ. ಆದರೆ ಕೆಲವು ಸಮುದಾಯಗಳಲ್ಲಿ ಭಯದ ವಾತಾವರಣವುಂಟಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕಿಂತ ಹೆಚ್ಚಾಗಿ ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದರು.

ದೇಶದಲ್ಲಿ ಅಶಾಂತಿ, ಅಪನಂಬಿಕೆ ಉಂಟುಮಾಡುವ ವಾತಾವರಣ ಕಾಣುತ್ತಿದ್ದೇವೆ. ವಲಸೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲೂ ವಲಸಿಗರ ಸಮಸ್ಯೆ ಕಂಡುಬಂದಿದೆ ಎಂದರು.

ಕೇಂದ್ರ ಸರ್ಕಾರ ಸಂವಿಧಾನದ 370ನೆ ಪರಿಚ್ಛೇದ ರದ್ದು ಮಾಡಿದೆ. ನಂತರ ರಾಷ್ಟ್ರೀಯ ಪೌರತ್ವ ಕಾಯಿದೆ ಹಾಗೂ ಎನ್‍ಆರ್‍ಸಿಗೆ ಮುಂದಾಗಿದೆ ಎಂದರು.

ಈ ವಿಚಾರ ಇನ್ನೂ ಸುಪ್ರೀಂಕೋರ್ಟ್‍ನಲ್ಲಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿಯವರು ಜನವರಿಯಲ್ಲೇ ಅನುಷ್ಠಾನ ಮಾಡುವುದಾಗಿ ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಬಂಡಪ್ಪ ಕಾಶಂಪುರ್, ಪರಿಷತ್ ಸದಸ್ಯರಾದ ಶರವಣ, ಫಾರೂಕ್, ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ