ನಿಮ್ಮಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ- ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಡಿ.18- ಉಪಮುಖ್ಯಮಂತ್ರಿ ಸ್ಥಾನಮಾನ ಕುರಿತಂತೆ ಹಾದಿಬೀದಿಯಲ್ಲಿ ಮಾತನಾಡುವ ಅಗತ್ಯವಿಲ್ಲ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿಕೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಅಶ್ವಥ್ ನಾರಾಯಣ ನನಗೆ ನೀತಿ ಪಾಠ ಹೇಳಬೇಕಾದ ಅಗತ್ಯವಿಲ್ಲ. ನಾನು ಹಾದಿಬೀದಿಯಲ್ಲಿ ಮಾತನಾಡಿಲ್ಲ. ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆಯೂ ಮಾಡಿಲ್ಲ. ಹಾಗಿದ್ದರೂ ಇವರೇಕೆ ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.

ನಾನು ಪಕ್ಷದ ಹೈಕಮಾಂಡ್‍ಗೆ ಹೇಗೆ ಗೌರವ ಕೊಡಬೇಕೆಂಬುದನ್ನು ತಿಳಿದುಕೊಂಡಿದ್ದೇನೆ. ಸಿಎಂ ಯಡಿಯೂರಪ್ಪ , ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್‍ಕಟೀಲ್ ಹಾಗೂ ರಾಷ್ಟ್ರೀಯ ನಾಯಕರ ಮೇಲೆ ಗೌರವವಿದೆ. ನನಗೆ ಅಶ್ವಥ್ ನಾರಾಯಣರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಶಾಸಕರ ಅಭಿಪ್ರಾಯವನ್ನೇ ನಾನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದೇನೆ ಎಲ್ಲೂ ಕೂಡ ಹೈಕಮಾಂಡ್ ನಿರ್ಧಾರವನ್ನಾಗಲಿ ಇಲ್ಲವೇ ಯಡಿಯೂರಪ್ಪನವರ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿಲ್ಲ. ಯಡಿಯೂರಪ್ಪನವರು ನಮ್ಮ ನಾಯಕರು ಅವರ ಬಗ್ಗೆ ನಾನು ಎಂದು ಕೂಡ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ನೈತಿಕತೆ ಪಾಠ ಮಾಡುವ ಅಶ್ವಥ್ ನಾರಾಯಣ ಬಿಬಿಎಂಪಿ ಚುನಾವಣೆ ವೇಳೆ ಟಿಕೆಟ್ ನೀಡಿರುವುದಕ್ಕೆ ಯಾರನ್ನು ಪ್ರಶ್ನೆ ಮಾಡಿದ್ದರು ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ನಾನು ಎಲ್ಲಿಯೂ ಪಕ್ಷದ ಚೌಕಟ್ಟು ಮೀರಿ ಮಾತನಾಡಿಲ್ಲ. ನನಗೆ ಇನ್ನೊಬ್ಬರ ನೀತಿ ಪಾಠ ಬೇಡ ಎಂದು ರೇಣುಕಾಚಾರ್ಯ ಟಾಂಗ್ ಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ