ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ

ಬೆಂಗಳೂರು, ಡಿ.18- ಪೌರತ್ವ ತಿದ್ದುಪಡಿ ಮಸೂದೆ ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ.

ಜ.14ರ ಸಂಕ್ರಾಂತಿ ನಂತರವೇ ಸಂಪುಟ ವಿಸ್ತರಣೆಗೆ ದಿನಾಂಕವನ್ನು ನಿಗದಿಪಡಿಸಲಾಗುವುದು. ಅಲ್ಲಿಯ ತನಕ ಯಾವುದೇ ರೀತಿಯ ಪ್ರಮುಖ ನಿರ್ಧಾರ ಕೈಗೊಳ್ಳದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೇಂದ್ರ ವರಿಷ್ಠರು ನಿರ್ದೇಶನ ನೀಡಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಇದೇ ತಿಂಗಳ 22ರ ನಂತರ ಸಂಪುಟ ವಿಸ್ತರಣೆಯಾಗುವ ಸಂಭವವಿತ್ತು. 23ರಂದು ನವದೆಹಲಿಗೆ ತೆರಳಲು ತೀರ್ಮಾನಿಸಿದ್ದ ಬಿಎಸ್‍ವೈ ಕೇಂದ್ರ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ದಿನಾಂಕವನ್ನು ನಿಗದಪಡಿಸುತ್ತಿದ್ದರು.

ಆದರೆ ಕಳೆದ ಒಂದು ವಾರದಿಂದ ದೇಶಾದ್ಯಂತ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದಿನದಿಂದ ದಿನಕ್ಕೆ ಪ್ರತಿಭಟನೆ ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿ ತಿಳಿಯಾಗುವವರೆಗೂ ತಮ್ಮನ್ನು ಭೇಟಿಯಾಗದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚಿಸಿದ್ದಾರೆ.

ಜೊತೆಗೆ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಮೋದಿ, ಅಮಿತ್ ಷಾ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಸೇರಿದಂತೆ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಚುನಾವಣಾ ಬಹಿರಂಗ ಪ್ರಚಾರ ಮುಗಿಯುವವರೆಗೂ ತಾವು ಲಭ್ಯವಿರುವುದಿಲ್ಲ ಎಂದು ಬಿಎಸ್‍ವೈಗೆ ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಡಿ23ರ ನಂತರವೇ ದೆಹಲಿಗೆ ತೆರಳಲಿದ್ದು ಅಲ್ಲಿಯ ತನಕ ಸಂಪುಟ ವಿಸ್ತರಣೆ ಆಕಾಂಕ್ಷಿಗಳಿಗೆ ಗಗನಕುಸುಮವಾಗಲಿದೆ.

ತಕ್ಷಣವೇ ಸಂಪುಟ ವಿಸ್ತರಣೆ ಮಾಡುವಂತೆ ನೂತನ ಶಾಸಕರು ಸಿಎಂ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದರೂ ಬಿಎಸ್‍ವೈ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ವರಿಷ್ಠರ ಬಳಿ ಚರ್ಚಿಸದೆ ನಾನು ಯಾವುದೇ ಪ್ರಮುಖ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ನೀವು ಆತಂಕಪಡುವ ಅಗತ್ಯವೂ ಇಲ್ಲ ಎಂದು ಅಭಯ ನೀಡಿದ್ದಾರೆ.

ತಮ್ಮನ್ನು ಭೇಟಿಯಾಗುವ ಸಚಿವ ಆಕಾಂಕ್ಷಿಗಳಿಗೆ ಇದೇ ಮಾತನ್ನು ಪುನರುಚ್ಚರಿಸಿರುವ ಮುಖ್ಯಮಂತ್ರಿ, ಕೊಟ್ಟಿರುವ ಮಾತಿನಂತೆ ನಿಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು. ಆದರೆ ಕೇಂದ್ರ ನಾಯಕರ ಚರ್ಚೆ ಮಾಡದೆ ನಾನೊಬ್ಬನೇ ನಿರ್ಧರಿಸಲು ಸಾಧ್ಯವಿಲ್ಲ. ಇದನ್ನು ಅರ್ಥ ಎಲ್ಲರೂ ಮಾಡಿಕೊಳ್ಳಬೇಕೆಂದು ಮನವರಿಕೆ ಮಾಡಿದ್ದಾರೆ.

ಸಂಪುಟದಲ್ಲಿ ಸದ್ಯ 16 ಸ್ಥಾನಗಳು ಖಾಲಿಯಿದ್ದು, ಈ ಸ್ಥಾನಗಳ ಮೇಲೆ ಬರೋಬ್ಬರಿ ನಾಲ್ಕು ಡಜನ್ ಶಾಸಕರು ಕಣ್ಣಿಟ್ಟಿದ್ದಾರೆ. ಯಾರಿಗೆ ಕೊಟ್ಟರೂ ಅಸಮಾಧಾನಗೊಳ್ಳಬಹುದೆಂಬ ಭೀತಿಯಿಂದಾಗಿ ಯಡಿಯೂರಪ್ಪ ಕೂಡ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.

ಫಲಿತಾಂಶ ಪ್ರಕಟಗೊಂಡ ಮರುದಿನವೇ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದರಾದರೂ ಪರಿಸ್ಥಿತಿ ಮಾತ್ರ ಅಂದುಕೊಂಡಷ್ಟು ಸರಳವಾಗಿಲ್ಲ.

ಸಂಪುಟದಲ್ಲಿ ಸ್ಥಾನಮಾನ ಸಿಗದವರು ಬಂಡಾಯ ಸಾರಬಹುದೆಂಬ ಕಾರಣಕ್ಕಾಗಿ ಅತ್ಯಂತ ಜಾಗರೂಕತೆಯ ನಡೆ ಅನುಸರಿಸಿದ್ದಾರೆ. ಇನ್ನೇನು ಸಚಿವರಾಗೇಬಿಟ್ಟೆವು ಎಂದು ಮನಸ್ಸಿನಲ್ಲಿ ಮಂಡಕ್ಕಿ ಮೇಯುತ್ತಿದ್ದ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ