ದೆಹಲಿ ಚುನಾವಣಾ ಆಯೋಗದಲ್ಲಿ ಅಮಿತ್ ಷಾ ವಿರುದ್ಧ ದೂರು :

ಮೈಸೂರು, ಏ.3- ಬಿಜೆಪಿ ಕಾರ್ಯಕರ್ತ ಮೃತ ರಾಜು ಕುಟುಂಬಕ್ಕೆ ಅಮಿತ್ ಷಾ 5 ಲಕ್ಷ ರೂ. ಪರಿಹಾರ ಘೋಷಣೆ ಹಿನ್ನೆಲೆಯಲ್ಲಿ ದೆಹಲಿ ಚುನಾವಣಾ ಆಯೋಗದಲ್ಲಿ ಅಮಿತ್ ಷಾ ವಿರುದ್ಧ ದೂರು ದಾಖಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಚುನಾವಣಾ ಆಯೋಗ ಬೆಂಗಳೂರಿನ ಚುನಾವಣಾ ಆಯೋಗಕ್ಕೆ ಈ ಕೇಸನ್ನು ವರ್ಗಾಯಿಸಿದೆ. ಹಾಗಾಗಿ ಬೆಂಗಳೂರು ಚುನಾವಣಾ ಆಯೋಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೇಳಿದೆ ಎಂದು ತಿಳಿಸಿದರು.
ಬೆಂಗಳೂರು ಚುನಾವಣಾ ಆಯೋಗ ವರದಿ ಕೇಳಿರುವ ಹಿನ್ನೆಲೆಯಲ್ಲಿ ನಾವು ಮೃತ ರಾಜು ಕುಟುಂಬದವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡುತ್ತೇವೆ ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈವರೆಗೂ 26 ವಿವಿಧ ರೀತಿಯ ದೂರುಗಳು ಬಂದಿವೆ. ಈಗಾಗಲೇ 4 ಎಫ್‍ಐಆರ್ ದಾಖಲಿಸಲಾಗಿದೆ. 144 ಸ್ಥಳಲ್ಲಿ ದಾಳಿ ನಡೆಸಲಾಗಿದೆ. ಅಕ್ರಮ ಮದ್ಯ ಸಾಗಾಣಿಕೆ ಆರೋಪದಡಿ 29 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಮತದಾರರಿಗೆ ಸಭೆ, ಪ್ರಚಾರ ಸಂದರ್ಭಗಳಲ್ಲಿ ಊಟ ನೀಡಲು ಅನುಮತಿ ಕೇಳಿದ್ದಾರೆ. ಹಾಗೆಯೇ ಕೆಲ ಗಣ್ಯವ್ಯಕ್ತಿಗಳು ಕೂಡ ದೂರವಾಣಿ ಮೂಲಕ ಅನುಮತಿ ಕೇಳಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ