ಏ.10ರಂದು ಬಿಜೆಪಿ ಮೊದಲ 140 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು, ಏ.3- ವಿಧಾನಸಭೆ ಚುನಾವಣೆಗೆ ದಿನಗಣನೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಏ.10ರಂದು ಮೊದಲ 140 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ವಾರಾಂತ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಶ್‍ಗೋಯಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅಶ್ವತ್ಥ್, ಪ್ರಹ್ಲಾದ್‍ಜೋಷಿ ಮತ್ತಿತರರು ದೆಹಲಿಗೆ ತೆರಳುವರು.

ಹಾಲಿ ಶಾಸಕರೂ ಸೇರಿದಂತೆ ಅನ್ಯ ಪಕ್ಷಗಳಿಂದ ಬಂದಿರುವ ಪ್ರಮುಖರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆಯಾಗಲಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 140 ಅಭ್ಯರ್ಥಿಗಳ ಹೆಸರನ್ನು ಕೇಂದ್ರ ವರಿಷ್ಠರು ಬಿಡುಗಡೆ ಮಾಡಲಿದ್ದಾರೆ.
ಈಗಾಗಲೇ ಪಟ್ಟಿ ದೆಹಲಿಯಲ್ಲಿರುವ ಪಕ್ಷದ ಚುನಾವಣಾ ಸಮಿತಿಗೆ ತಲುಪಿದೆ. ಹಾಲಿ ಶಾಸಕರನ್ನು ಹೊರತುಪಡಿಸಿ, ಉಳಿದ ವಿಧಾನಸಭಾ ಕ್ಷೇತ್ರಗಳಿಗೆ 2ರಿಂದ 3ರ ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿದೆ.

ಇಡೀ ಪಟ್ಟಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೈ ಸೇರಿದ್ದು, ಗೆಲ್ಲುವ ಕುದುರೆಗಳನ್ನಷ್ಟೇ ಆಯ್ಕೆ ಮಾಡಬೇಕೆಂದು ಸಮಿತಿ ಸದಸ್ಯರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಪಟ್ಟಿಯಲ್ಲಿ ಕೆಲವು ಕ್ಷೇತ್ರಗಳಿಗೆ ಅಚ್ಚರಿಯ ಹೆಸರುಗಳು ಘೋಷಣೆಯಾಗುವ ಸಂಭವವಿದೆ. ಇನ್ನು ಬೆಂಗಳೂರಿನಲ್ಲಿ 2ರಿಂದ 3, ಮೂರರಿಂದ ನಾಲ್ಕು ಬಾರಿ ಗೆದ್ದು ಒಂದೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿರುವವರು ಬದಲಿ ಕ್ಷೇತ್ರಗಳಿಂದ ಸ್ಪರ್ಧಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು.

ಮೂಲಗಳ ಪ್ರಕಾರ ಪದ್ಮನಾಭನಗರ, ರಾಜಾಜಿನಗರ, ದಾಸರಹಳ್ಳಿ ಸೇರಿದಂತೆ ಕೆಲವು ಕ್ಷೇತ್ರಗಳ ಹೆಸರು ಅದಲು ಬದಲಾಗುವ ಸಂಭವವಿದೆ.
ಪದ್ಮನಾಭನಗರ ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಹಾಲಿ ಈ ಕ್ಷೇತ್ರದ ಶಾಸಕ ಆರ್.ಅಶೋಕ್‍ಗೆ ದಾಸರಹಳ್ಳಿಯಿಂದ ಸ್ಪರ್ಧಿಸುವಂತೆ ಪಕ್ಷದ ಪ್ರಮುಖರು ಮನವಿ ಮಾಡಿದ್ದಾರೆ.

ಪದ್ಮನಾಭನಗರಕ್ಕೆ ಪಕ್ಷದ ಕಾರ್ಯಕರ್ತರಿಗೆ ನೀಡಿದರೆ ಹೆಚ್ಚುವರಿಯಾಗಿ ಒಂದು ಕ್ಷೇತ್ರವನ್ನು ಪಡೆದುಕೊಳ್ಳಬಹುದು ಎಂಬುದು ಕೇಸರಿ ಪಡೆಯ ಲೆಕ್ಕಾಚಾರ.
ಇನ್ನು ಇದೇ ರೀತಿ ಬಿಜೆಪಿಯ ಮತ್ತೊಂದು ಭದ್ರಕೋಟೆ ರಾಜಾಜಿನಗರದ ಹಾಲಿ ಶಾಸಕ ಸುರೇಶ್‍ಕುಮಾರ್ ಅವರನ್ನು ಪಕ್ಷದ ಗಾಂಧಿನಗರದಿಂದ ಸ್ಪರ್ಧಿಸುವಂತೆ ಪಕ್ಷದ ನಾಯಕರು ಕೇಳಿಕೊಂಡಿದ್ದಾರೆ.

ರಾಜಾಜಿನಗರದಿಂದ ಯುವ ನಾಯಕರೊಬ್ಬರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಗಾಂಧಿನಗರದಿಂದ ಸುರೇಶ್‍ಕುಮಾರ್ ಅಖಾಡಕ್ಕಿಳಿದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ವೇಗಕ್ಕೆ ಕಡಿವಾಣ ಹಾಕಬಹುದೆಂಬ ಲೆಕ್ಕಾಚಾರ ಅಡಗಿದೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮುನಿರಾಜುವಿಗೂ ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ಪಕ್ಷದ ವರಿಷ್ಠರು ಅಭಿಪ್ರಾಯ ಪಡೆದಿದ್ದಾರೆ. ಮುನಿರಾಜುಗೆ ರಾಜರಾಜೇಶ್ವರಿನಗರದಿಂದ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ.
ಇದೇ ರೀತಿ ಹಲವು ಕ್ಷೇತ್ರಗಳು ಅದಲು-ಬದಲಾಗಲಿದ್ದು, ಅಭ್ಯರ್ಥಿಗಳು ಸೂಚಿಸಿದ ಕ್ಷೇತ್ರಗಳಿಗೆ ಇಷ್ಟವೋ, ಕಷ್ಟವೋ ಒಪ್ಪಿಕೊಳ್ಳಬೇಕಾಗುತ್ತದೆ.

ಇಬ್ಬರು ಸಂಸದರಿಗೆ ಮಾತ್ರ ಟಿಕೆಟ್:
ಇನ್ನು ಮೊದಲ ಪಟ್ಟಿಯಲ್ಲಿ ಹಾಲಿ ಸಂಸದರ ಪೈಕಿ ಶಿಕಾರಿಪುರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಹಾಗೂ ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಬಳ್ಳಾರಿ ಗ್ರಾಮೀಣ ಇಲ್ಲವೇ ಮೊಳಕಾಲ್ಮೂರಿನಿಂದ ಟಿಕೆಟ್ ಸಿಗುವ ಸಂಭವವಿದೆ.
ಉಳಿದಂತೆ ಇನ್ನು ಯಾವುದೇ ಹಾಲಿ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ