ಅಧಿಸೂಚನೆ ಹೊರಬಾರದ ಕಾರಣ ಸೆ.27ರಂದು ಸ್ಥಾಯಿ ಸಮಿತಿಗಳಿಗೆ ಚುನಾವಣೆಯಿಲ್ಲ

ಬೆಂಗಳೂರು, ಸೆ.17-ಇದೇ 27 ರಂದು ನಡೆಯಲಿರುವ ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುವುದಿಲ್ಲ.

ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಬೇಕೆಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಹಾಗೂ ನಗರಾಭಿವೃದ್ಧಿ ಇಲಾಖೆಗೆ ದೂರು ಕೊಟ್ಟಿದ್ದರು.

1998 ಮತ್ತು 2010ರ ಅವಧಿಯಲ್ಲಿ ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು ಎಂದು ಆ ತೀರ್ಪಿನ ಪ್ರತಿಗಳನ್ನು ಕೂಡ ಅವರು ಸಲ್ಲಿಸಿದ್ದರು.

ರೆಡ್ಡಿಯವರ ಈ ನಡೆಯಿಂದ ಎಚ್ಚೆತ್ತ ಸ್ಥಾಯಿ ಸಮಿತಿ ಅಧ್ಯಕ್ಷರು ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ನೇತೃತ್ವದಲ್ಲಿ ಪ್ರಾದೇಶಿಕ ಆಯುಕ್ತರನ್ನು ಭೇಟಿಯಾಗಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಅಂದಿನ ಪ್ರಾದೇಶಿಕ ಆಯುಕ್ತರು ಸದಸ್ಯರ ಅವಧಿ 2019ರ ಡಿಸೆಂಬರ್ ವರೆಗೂ ಇರಲಿದೆ ಎಂದು ಸಹಿ ಹಾಕಿದ್ದಾರೆ. ಹಾಗಾಗಿ ನಮ್ಮ ಅವಧಿ ಡಿಸೆಂಬರ್‍ವರೆಗೂ ಇರಲಿದೆ ಎಂದು ಪ್ರತಿದೂರು ಸಲ್ಲಿಸಿದ್ದರು.

ಎರಡೂ ಕಡೆಯ ವಾದ-ವಿವಾದ ಆಲಿಸಿದ್ದ ಹರ್ಷಗುಪ್ತಾ ಅವರು ಅಡ್ವೊಕೇಟ್ ಜನರಲ್ ಅವರಿಗೆ ಈ ಬಗ್ಗೆ ಕಾನೂನು ಅಭಿಪ್ರಾಯ ಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಮೇಯರ್-ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕಿದ್ದರೆ, ಈಗಾಗಲೇ ಅಧಿಸೂಚನೆ ಹೊರಡಿಸಬೇಕಾಗಿತ್ತು.ಆದರೆ ಈವರೆಗೂ ಯಾವುದೇ ಅಧಿಸೂಚನೆ ಹೊರಬಾರದ ಕಾರಣ ಸೆ.27 ರಂದು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಾರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ