ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ-ಸಚಿವ ಆರ್.ಆಶೋಕ್

ಬೆಂಗಳೂರು, ಸೆ.17-ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಮನವಿಯನ್ನು ಪರಿಷ್ಕರಿಸಿ ಮತ್ತೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರಕ್ಕಾಗಿ 38,451 ಕೋಟಿ ರೂ.ಪರಿಹಾರ ನೀಡುವಂತೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಪರಿಷ್ಕರಿಸಿ 35,160 ಕೋಟಿ ರೂ.ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವಂತೆ ನಾಳೆ ಅಧಿಕಾರಿಗಳು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಖಾಸಗಿ ಶಾಲೆ, ಆಸ್ಪತ್ರೆಗಳಿಗೆ ಪರಿಹಾರ ದೊರೆಯುವುದಿಲ್ಲ. ಹೀಗಾಗಿ ಪರಿಷ್ಕøತ ಮನವಿ ಪತ್ರದಲ್ಲಿ ಖಾಸಗಿ ಶಾಲೆ ಮತ್ತು ಆಸ್ಪತ್ರೆಗಳನ್ನು ಕೈಬಿಡಲಾಗಿದೆ ಎಂದರು.

ಒಂದು ಲಕ್ಷ ರೂ. ಬಿಡುಗಡೆಗೆ ಆದೇಶ:
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ಕಳೆದುಕೊಂಡವರು ಹೊಸ ಮನೆ ಕಟ್ಟಿಕೊಳ್ಳಲು ತಕ್ಷಣವೇ ಒಂದು ಲಕ್ಷ ರೂ. ನೀಡಲು ಆದೇಶಿಸಲಾಗಿದೆ. ಸುಮಾರು 50 ಸಾವಿರ ಮನೆ ಕಳೆದುಕೊಂಡವರು ಮನೆ ಕಟ್ಟಲು ಮುಂದಾಗುತ್ತಿದ್ದಾರೆ. ಉಳಿದವರ ದಾಖಲೆಗಳನ್ನು ಆಧಾರ್‍ನೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ.

ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ನೀಡಲಾಗುತ್ತದೆ. ಈಗಾಗಲೇ ತಾವು ಮೈಸೂರು, ಹಾವೇರಿ, ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯದ ಪರಿಶೀಲನೆ ನಡೆಸಿದ್ದು, ಸದ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಭೇಟಿ ನೀಡಲಾಗುವುದು ಎಂದರು.

ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರಾದವರಿಗೆ ತಕ್ಷಣವೇ 10 ಸಾವಿರ ರೂ. ಪರಿಹಾರವನ್ನು ನೀಡಲಾಗಿದೆ. ಬೆಳಗಾವಿಯಲ್ಲಿ 1300 ಅರ್ಜಿಗಳ ಬಗ್ಗೆ ಆಕ್ಷೇಪವಿದ್ದು, ಬೊಗಸ್ ಆಗದಂತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ