ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರಿಗೆ ವಿಚಾರಣೆ ಬಾಕಿಯಿರುವ ಹಿನ್ನೆಲೆ-ಸದ್ಯಕ್ಕೆ ಉಪಚುನಾವಣೆ ಸಿದ್ಧತೆಯಿಲ್ಲ

ಬೆಂಗಳೂರು, ಸೆ.17-ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರಿಗೆ ಸಂಬಂಧಿಸಿದ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಉಪಚುನಾವಣೆ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಕಬ್ಬನ್ ಪಾರ್ಕ್‍ನಲ್ಲಿಂದು ಸಸಿ ನೆಟ್ಟು ಹಾಗೂ ಸಾರ್ವಜನಿಕರಿಗೆ ಸಸಿ ವಿತರಿಸುವ ಮೂಲಕ ಆಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಬಂದ ನಂತರ ಚುನಾವಣಾ ಪ್ರಕ್ರಿಯೆಗಳು ಆರಂಭವಾಗುತ್ತವೆ. ಶಾಸಕರ ಅನರ್ಹತೆ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಚುನಾವಣೆ ಬಗ್ಗೆ ಸ್ಪಷ್ಟತೆ ಇಲ್ಲ. ತೀರ್ಪು ಬಂದ ನಂತರ ಚುನಾವಣೆ ಸಿದ್ಧತೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಅನರ್ಹ ಶಾಸಕರ ಜೊತೆ ನಾವಿದ್ದೇವೆ. ಅವರ ಭಾವನೆಗಳಿಗೆ ನಮ್ಮ ಸಹಮತವೂ ಇದೆ. ಆದಷ್ಟು ಬೇಗ ವಿಚಾರಣೆ ನಡೆದು ತೀರ್ಮಾನವಾಗಲಿ ಎಂದು ಅವರು ಹೇಳಿದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್‍ಪ್ರಸಾದ್, ಶಾಸಕ ಸತೀಶ್‍ರೆಡ್ಡಿ, ಮಾಜಿ ಶಾಸಕ ಸುರೇಶ್‍ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ