ಹೊಸದಿಲ್ಲಿ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ ಸ್ಥಾನವನ್ನು ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಈ ಸ್ಥಾನಕ್ಕೆ ಪರ್ಯಾಯ ನಾಯಕನನ್ನು ಹುಡುಕುತ್ತಿರುವ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿಯುವರಾ? ಎಂಬ ಪ್ರಶ್ನೆ ಇದೀಗ ಮೂಡಿದೆ.
ಸೋನಿಯಾ ಗಾಂಧಿ ಮತ್ತೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಹುದ್ದೆಗೆ ಏರಿದ ನಂತರ ಗುರುವಾರ ದೆಹಲಿಯಲ್ಲಿ ಪಕ್ಷದ ಮೊದಲ ಸಭೆ ಏರ್ಪಡಿಸಲಾಗಿತ್ತು. ಈ ಸಭೆಗೆ ಎಲ್ಲಾ ರಾಜ್ಯದ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿತ್ತು. ಕರ್ನಾಟಕದಿಂದ ಸಿದ್ದರಾಮಯ್ಯ ಈ ಸಭೆಯನ್ನು ಪ್ರತಿನಿಧಿಸಿದ್ದರು.
ಈ ವೇಳೆ ಹಿರಿಯ ನಾಯಕರಾದ ಅಹಮದ್ ಪಟೇಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಎ.ಕೆ. ಆಂಟನಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಈ ಬಾರಿಯೂ ಪ್ರತಿಪಕ್ಷ ನಾಯಕ ಸ್ಥಾನವನ್ನು ತನಗೆ ನೀಡುವಂತೆ ಒತ್ತಡ ಹೇರಿದ್ದರು. ಅಲ್ಲದೆ, ಈ ಕುರಿತು ಚರ್ಚಿಸಲು ಇಂದು ಅವರು ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ.
ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ ಸಿದ್ದರಾಮಯ್ಯನವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ಸೋನಿಯಾ ಗಾಂಧಿಗೆ ಆಸಕ್ತಿ ಇಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮಹಾರಾಷ್ಟ್ರ ಮಾದರಿಯಲ್ಲಿ 2 ಹುದ್ದೆಗಳನ್ನು ಸೃಷ್ಟಿಸಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿಯು ತಿಳಿದುಬಂದಿದೆ.
ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಸಿಎಲ್ಪಿ ಮತ್ತು ಪ್ರತಿಪಕ್ಷದ ನಾಯಕತ್ವ ಎಂದು ಎರಡು ಹುದ್ದೆಗಳನ್ನು ಸೃಷ್ಟಿ ಮಾಡುವ ಮೂಲಕ ಪಕ್ಷದೊಳಗಿನ ಅಧಿಕಾರವನ್ನು ಹಂಚಿಕೆ ಮಾಡಿತ್ತು. ಈ ಮಾದರಿ ಯಶಸ್ವಿಯಾಗಿರುವ ಪರಿಣಾಮ ರಾಜ್ಯದಲ್ಲೂ ಇದನ್ನೇ ಅನುಸರಿಸಲು ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಇಬ್ಬರಿಗೆ ಅವಕಾಶ ನೀಡುವ ಚಿಂತನೆ ನಡೆಸಿದೆ.
ಈ ತಂತ್ರದ ಪ್ರಕಾರ ಸಿದ್ದರಾಮಯ್ಯನವರನ್ನು ಸಿಎಲ್ಪಿ ನಾಯಕನನ್ನಾಗಿ ನೇಮಕ ಮಾಡಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಹೊಸ ಮುಖವನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಈ ಮೂಲಕ ಸಿದ್ದರಾಮಯ್ಯನವರ ಪ್ರಭಾವವನ್ನು ಕುಗ್ಗಿಸುವುದು ಕಾಂಗ್ರೆಸ್ ಹೈಕಮಾಂಡ್ ರಣತಂತ್ರ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಇಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತಿರುವುದು ಸಹ ಮಹತ್ವ ಪಡೆದುಕೊಂಡಿದೆ. ಈ ಭೇಟಿಯ ವೇಳೆ ಸೋನಿಯಾ ಗಾಂಧಿ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿಯುವರಾ? ಅಥವಾ ಪ್ರತಿಪಕ್ಷ ನಾಯಕನ ಸ್ಥಾನಮಾನ ಸಿದ್ದರಾಮಯ್ಯನವರ ಕೈ ತಪ್ಪುತ್ತದೆಯಾ? ಎಂಬುದನ್ನು ಕಾದು ನೋಡಬೇಕಿದೆ.