ಬೆಂಗಳೂರು,ಸೆ.6- ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಲಾಗಿದ್ದು, ಕೇವಲ ಬಿಜೆಪಿ ಮತ್ತು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಿ, ಕಾಂಗ್ರೆಸ್-ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಈ ಮೊದಲು ನೀಡಿದ್ದ ಅನುದಾನವನ್ನು ಕಡಿತ ಮಾಡಲಾಗಿದೆ.
ಜು.18ರಂದು ಈ ಹಿಂದಿನ ಸರ್ಕಾರದ ಸೂಚನೆ ಮೇರೆಗೆ ಅಧಿಕಾರಿಗಳು ಹೈದರಾಬಾದ್-ಕರ್ನಾಟಕ ಭಾಗದ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರ್ಗಿ ಮತ್ತು ಬಳ್ಳಾರಿ ಜಿಲ್ಲೆಗಳ 41 ವಿಧಾನಸಭಾ ಕ್ಷೇತ್ರಗಳಿಗೆ 75 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಿದ್ದರು.
ಇತ್ತೀಚೆಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾಂಗ್ರೆಸ್-ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಕಡಿತ ಮಾಡಿ ಬಿಜೆಪಿ ಮತ್ತು ಅನರ್ಹ ಶಾಸಕರಿರುವ 19 ಕ್ಷೇತ್ರಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಿದ್ದಾರೆ.
ಇದರಿಂದಾಗಿ ಉಳಿದ 22 ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಸಿಗಬೇಕಿದ್ದ ಅನುದಾನ ತಪ್ಪಿಹೋಗಿದೆ.
ಈ ಹಿಂದೆ ಜುಲೈ 18ರಂದು ಪಿಡಿಎಸ್-07ಎಚ್ಕೆಡಿ 2019 ಆದೇಶದಲ್ಲಿ 2019-20ನೇ ಸಾಲಿನ ಕ್ರಿಯಾ ಯೋಜನೆಗೆ 75 ಕೋಟಿ ರೂ.ಗಳನ್ನು ಮಂಜೂರು ಮಾಡಿ ಪಕ್ಷಾತೀತವಾಗಿ ಎಲ್ಲಾ ಕ್ಷೇತ್ರಗಳಿಗೂ ಹಣ ಹಂಚಿಕೆಯಾಗಿತ್ತು.
ಅದರಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಒಂದಿಷ್ಟು ಹೆಚ್ಚು ನೀಡಲಾಗಿತ್ತು. ಗುಲ್ಬರ್ಗಾ ಜಿಲ್ಲೆಯ ಕಾಂಗ್ರೆಸ್ ಶಾಸಕರಿರುವ ಎಂ.ವೈ.ಪಾಟೀಲ್ ಅವರ ಅಫ್ಜಲ್ಪುರ, ಅಜಯ್ಸಿಂಗ್ ಅವರ ಜೇವರ್ಗಿ, ಪ್ರಿಯಾಂಕ್ ಖರ್ಗೆ ಅವರ ಚಿತ್ತಾಪುರ, ಖನೀಜ್ಫಾತೀಮಾ ಅವರ ಗುಲ್ಬರ್ಗಾ ಉತ್ತರ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ತಲಾ ಎರಡು ಕೋಟಿ, ಬಸವನಗೌಡ ದದ್ದಲ್ ಅವರ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ 8, ಡಿ.ಎಸ್.ಹೊಲಗೇರಿ ಅವರ ಲಿಂಗಸಗೂರು ಮತ್ತು ಜೆಡಿಎಸ್ ಶಾಸಕರಾದ ವೆಂಕಟರಾವ್ ನಾಡಗೌಡ ಅವರ ಸಿಂಧನೂರು ಕ್ಷೇತ್ರಕ್ಕೆ ತಲಾ 5ಕೋಟಿ, ಜೆಡಿಎಸ್ನ ರಾಜವೆಂಕಟಪ್ಪ ನಾಯಕ್ ಅವರ ಮಾನ್ವಿ ಕ್ಷೇತ್ರಕ್ಕೆ ನಾಲ್ಕೂವರೆ ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು.
ಈ ಆದೇಶವನ್ನು ರದ್ದು ಮಾಡಿ ಆಗಸ್ಟ್ 30ರಂದು ಹೊಸ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಮೀಸಲಿಟ್ಟ 75 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅನುದಾನವನ್ನು ರದ್ದುಪಡಿಸುವುದಾಗಿ ತಿಳಿಸಲಾಗಿದೆ.
ಸಿಎಂ/44619ಎಂಐಎನ್/19 ಪರಿಷ್ಕøತ ಆದೇಶದಲ್ಲಿ ಅನುದಾನವನ್ನು ಮರು ಹಂಚಿಕೆ ಮಾಡಲಾಗಿದ್ದು, ಬಿಜೆಪಿ ಮತ್ತು ಅನರ್ಹ ಶಾಸಕರಿರುವ 19 ಕ್ಷೇತ್ರಗಳಿಗೆ ಮಾತ್ರ ಅನುದಾನ ಹಂಚಿಕೆಯಾಗಿದೆ. ಅದರಲ್ಲೂ ಅನರ್ಹಗೊಂಡಿರುವ ಮಸ್ಕಿಯ ಪ್ರತಾಪ್ಗೌಡ ಪಾಟೀಲ್, ಹೊಸಪೇಟೆಯ ಆನಂದ್ಸಿಂಗ್ ಅವರ ಕ್ಷೇತ್ರಗಳಿಗೆ ಅತಿ ಹೆಚ್ಚು ಅಂದರೆ 11ಕೋಟಿ ರೂ.ಗಳನ್ನು ನೀಡಲಾಗಿದೆ.
ಉಳಿದಂತೆ ಬಿಜೆಪಿ ಶಾಸಕರಾದ ಡಾ.ಶಿವರಾಜ್ಪಾಟೀಲ್ ಅವರ ರಾಯಚೂರುನಗರಕ್ಕೆ ನಾಲ್ಕು ಕೋಟಿ, ದತ್ತಾತ್ರೇಯಪಾಟೀಲ್ ರೇವೂರ ಅವರ ಗುಲ್ಬರ್ಗ ದಕ್ಷಿಣ ಮತ್ತು ಸೋಮಶೇಖರ ರೆಡ್ಡಿಯವರ ಬಳ್ಳಾರಿನಗರಕ್ಕೆ ತಲಾ ಮೂರುವರೆ ಕೋಟಿ ಹಾಗೂ ರಾಜೂಗೌಡ ಅವರ ಸುರಪುರ, ವೆಂಕಟರೆಡ್ಡಿ ಮುದ್ನಾಳ್ ಅವರ ಯಾದಗಿರಿ, ರಾಜ್ಕುಮಾರ್ ಪಾಟೀಲರ ಸೇಡಂ, ಅವಿನಾಶ್ ಜಾಧವ್ ಅವರ ಚಿಂಚೋಳಿ, ಬಸವರಾಜ್ ಮತ್ತಿಮೋಡ್ ಅವರ ಗುಲ್ಬರ್ಗ ಗ್ರಾಮೀಣ, ಸುಭಾಷ್ ಗುತ್ತೇದಾರ್ ಅವರ ಆಳಂದ, ಪ್ರಭು ಚೌವ್ಹಾಣ್ರ ಔರಾದ್(ಬಿ), ಶಿವನಗೌಡ ನಾಯಕ್ ಅವರ ಕ್ಷೇತ್ರ ದೇವದುರ್ಗ, ಬಸವರಾಜ್ ದಡೆಸುಗೂರು ಅವರ ಕನಕಗಿರಿ, ಪರಣ್ಣಮುನವಳ್ಳಿ ಅವರ ಗಂಗಾವತಿ, ಬಸಪ್ಪ ಹಾಲಪ್ಪ ಆಚಾರ್ ಅವರ ಕ್ಷೇತ್ರ ಯಲಬುರ್ಗಾ, ಸೋಮಲಿಂಗಪ್ಪ ಅವರ ಸಿರಗುಪ್ಪ, ಎನ್.ವೈ.ಗೋಪಾಲಕೃಷ್ಣ ಅವರ ಕ್ಷೇತ್ರ ಕೂಡ್ಲಿಗಿ, ಕರುಣಾಕರ ರೆಡ್ಡಿಯವರ ಹರಪನಹಳ್ಳಿ ಕ್ಷೇತ್ರಗಳಿಗೆ ತಲಾ ಮೂರು ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.
ಹಂಚಿಕೆ ಮಾಡಿದ ಒಂದೂವರೆ ತಿಂಗಳ ಒಳಗಾಗಿಯೇ ಅನುದಾನ ಹಂಚಿಕೆಯಾಗಿಲ್ಲ ಎಂಬ ನೆಪವೊಡ್ಡಿ ಹಿಂಪಡೆದಿರುವುದು ಮತ್ತು ಮರು ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಹೈದರಾಬಾದ್ -ಕರ್ನಾಟಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.