ಹೈದರಾಬಾದ್ -ಕರ್ನಾಟಕ ಅಭಿವೃದ್ಧಿ ಮಂಡಳಿ ಇನ್ನು ಮುಂದೆ ಕಲ್ಯಾಣ ಕರ್ನಾಟಕ

ಬೆಂಗಳೂರು,ಸೆ.6- ಜನರ ಬಹುದಿನಗಳ ಬೇಡಿಕೆಯಂತೆ ಹೈದರಾಬಾದ್ -ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಇನ್ನು ಮುಂದೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಇನ್ನು ಮುಂದೆ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಲಾಗಿದೆ. ಅಲ್ಲಿನ ಜನರು ಮತ್ತು ಜನಪ್ರತಿನಿಧಿಗಳ ಒತ್ತಾಯದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧಿಕೃತ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ನಾನಾ ಕಡೆ ಭಾರೀ ಮಳೆ ಸುರಿದು ಸಾವು-ನೋವು ಅನುಭವಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರರು ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಲಿದ್ದಾರೆ ಎಂದರು.

ಅತಿವೃಷ್ಟಿಯನ್ನು ಸರ್ಕಾರ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ. ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ಎಲ್ಲಾ ಕಡೆ ಪ್ರವಾಸ ಮಾಡಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದ್ದಾರೆ. ಕೆಲವು ಕಡೆ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಸಮಸ್ಯೆ ಉಂಟಾಗದಂತೆ ಶಿಸ್ತು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಸಂತ್ರಸ್ತರಿಗೆ ಮೊದಲು ಮನೆ ನಿರ್ಮಿಸಿಕೊಡುವುದು ನಮ್ಮ ಮುಂದಿರುವ ಸವಾಲು. ಒಟ್ಟು 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ರಾಜ್ಯ ಸರ್ಕಾರ 1.30ಲಕ್ಷ ಹಾಗೂ ಉಳಿದ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಆದಷ್ಟು ಶೀಘ್ರ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಇದೊಂದು ಅಪರೂಪದ ಪ್ರಕರಣವಾಗಿರುವುದರಿಂದ ಸರ್ಕಾರ ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದರು.

ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗಿರುವುದರಿಂದ ಪುನಃ ರಾಜ್ಯದಲ್ಲಿ ಮತ್ತೆ ಪ್ರವಾಹದ ಭೀತಿ ಬರುತ್ತದೆ ಎಂಬ ಆತಂಕ ಬೇಡ. ಈಗಾಗಲೇ ಪ್ರವಾಹ ಉಂಟಾಗದಂತೆ ಏನೇನು ತುರ್ತು ಕಾರ್ಯಗಳನ್ನು ಕೈಗೊಳ್ಳಬೇಕಿತ್ತೋ ಅವೆಲ್ಲವನ್ನು ಕೈಗೊಂಡಿದೆ. ಜನರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ