ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿಯಿಂದ ಅದ್ಧೂರಿ ಸ್ವಾಗತ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಸಂಸದರಾದ ಬಿ.ಎನ್ ಬಚ್ಚೇಗೌಡ, ಮುನಿಸ್ವಾಮಿ, ಪ್ರತಾಪ ಸಿಂಹ, ಶಾಸಕರಾದ ಅಂಗಾರ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲು ಆಗಮಿಸಿದ್ದರು. ವೀರಗಾಸೆ, ಡೊಳ್ಳು ಕುಣಿತದೊಂದಿಗೆ ನಳಿನ್ ಕುಮಾರ್ ಅವರನ್ನು ಸ್ವಾಗತಿಸಲಾಯಿತು.

ಈ ವೇಳೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ತಮ್ಮ ನೂತನ ರಾಜ್ಯಾಧ್ಯಕ್ಷರಿಗೆ ಸ್ವಾಗತ ಕೋರಿದರು. ಈ ವೇಳೆ ಇಡೀ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೇ ಬಿಜೆಪಿ ಮಯವಾಗಿತ್ತು. ಅಲ್ಲದೆ ಬಿಜೆಪಿ ಮಹಿಳಾ ಕಾರ್ಯಕರ್ತರು ಅವರಿಗೆ ಆರತಿ ಬೆಳಗಿ ಪ್ರೀತಿಯಿಂದ ಸ್ವಾಗತಿಸಿದರು. ತೆರೆದ ವಾಹನದಲ್ಲಿ ನಳಿನ್ ಕುಮಾರ್ ಅವರು ಮೆರವಣಿಗೆ ನಡೆಸಲಿದ್ದು, ಅವರಿಗೆ ಬಿಜೆಪಿ ಶಾಸಕರು ಹಾಗೂ ಸಂಸದರು ಸಾಥ್ ನೀಡಲಿದ್ದಾರೆ.

ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪದಗ್ರಹಣ ಸಮಾರಂಭ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ನೂತನ ರಾಜ್ಯಾಧಕ್ಷರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಆಯ್ಕೆಯಾಗಿರುವ ಕಟೀಲ್ 12 ವರ್ಷಗಳ ಕಾಲ ಆರ್‍ಎಸ್‍ಎಸ್‍ನ ಪೂರ್ಣಾವಧಿ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಭಾನುವಾರವೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನದಿಂದ ಕಾರ್ಯಕ್ರಮ ಮುಂದೂಡಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ