ಫೋನ್​ ಟ್ಯಾಪಿಂಗ್​ ಪ್ರಕರಣ: ರಾಜಕಾರಣಿ, ಅಧಿಕಾರಿಗಳಿಗೆ ಮತ್ತಷ್ಟು ಸಂಕಷ್ಟ

ಬೆಂಗಳೂರುರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಪೋನ್ ಟ್ಯಾಪಿಂಗ್ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ಜೊತೆಗೆ ಸಿಐಡಿ ತನಿಖೆಗೂ ಆದೇಶಿಸಿದೆ. ಈ ಮೊದಲು ಸಿಎಂ ಬಿ.ಎಸ್​.ಯಡಿಯೂರಪ್ಪ ಫೋನ್​ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಮಾತ್ರ ಆದೇಶ ನೀಡಿದ್ದರು. ಬಳಿಕ ಎರಡು ರೀತಿಯ ತನಿಖೆಗೆ ಆದೇಶಿಸಿರುವ ಬಿಎಸ್​ವೈ, ಸಿಬಿಐ ಜೊತೆಗೆ ಸಿಐಡಿ ತನಿಖೆಗೂ ಆದೇಶ ನೀಡಿದ್ದಾರೆ.

ಕಮೀಷನರ್​ ಭಾಸ್ಕರ್​ ರಾವ್ ಅವರ​ ಆಡಿಯೋ ಲೀಕ್​ ಆಗಿದ್ದರ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ. ಫೋನ್​ ಕದ್ದಾಲಿಕೆ ಆಗಿದ್ದ ಆಡಿಯೋ ಲೀಕ್​ ಆಗಿದ್ದು ಹೇಗೆ ಎಂಬುದರ ಬಗ್ಗೆ ಕೂಡ ತನಿಖೆ ನಡೆಯಲಿದೆ ಎನ್ನಲಾಗಿದೆ. ಎಡಿಜಿಪಿ ದರ್ಜೆ ಅಧಿಕಾರಿ ಸಿಐಡಿ ಚರಣ್​ ರೆಡ್ಡಿ ನೇತೃತ್ವದಲ್ಲಿ ಆಡಿಯೋ ಲೀಕ್​ ಬಗ್ಗೆ ತನಿಖೆ ನಡೆಯಲಿದೆ. ಕಮೀಷನರ್ ಕಚೇರಿಯಿಂದ ಆಡಿಯೋ ಹೇಗೆ ಲೀಕ್​ ಆಯ್ತು ಎಂಬುದರ ಬಗ್ಗೆ ಸಿಐಡಿ ತನಿಖೆ ಮಾಡಲಿದೆ.

ಸಿಐಡಿ ತನಿಖೆ ಆದ ಬಳಿಕ ಎರಡನೇ ಆವೃತ್ತಿಯಲ್ಲಿ ಸಿಬಿಐ ತನಿಖೆ ನಡೆಯಲಿದೆ. ಈ ಹಿಂದಿನ ರಾಜ್ಯ ಸರ್ಕಾರ ಮಾಡಿರುವ ಫೋನ್​ ಕದ್ದಾಲಿಕೆ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ. ಹಿಂದಿನ ಸರ್ಕಾರದ ವಿರೋಧ ಪಕ್ಷದ ನಾಯಕರು, ಶಾಸಕರು, ಅತೃಪ್ತ ಶಾಸಕರ ಪೋನ್ ಕದ್ದಾಲಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ, ಎರಡು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಸಿಐಡಿ ಫೋನ್​ ಕದ್ದಾಲಿಕೆ ಪ್ರಕರಣವನ್ನು ಭೇದಿಸಲಿವೆ.

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೇ ಈ ಫೋನ್​ ಕದ್ದಾಲಿಕೆಯ ಹಿಂದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸರ್ಕಾರ ವಿರುದ್ಧವಾಗಿ ಯಾರ್ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಕುಮಾರಸ್ವಾಮಿ ಅವರೇ ಈ ಎಲ್ಲರ ಫೋನ್​ಗಳನ್ನು ಟ್ಯಾಪ್​ ಮಾಡಿಸಿದ್ದಾರೆ ಎಂಬ ಆರೋಪ ಕೂಡ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ನ್ಯೂಸ್​18 ಕನ್ನಡ ವರದಿ ಬಿತ್ತರ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ