ಹದಗೆಟ್ಟಿರುವ ಸಮಾಜವನ್ನು ಸರಿ ಪಡಿಸುವ ಕೆಲಸ ಮಾಡಬೇಕಾಗಿದೆ-ಹಿರಿಯ ಸಾಹಿತಿ ಗೊ.ರು.ಚೆನ್ನಬಸಪ್ಪ

ಬೆಂಗಳೂರು, ಆ.18- ಹದಗೆಟ್ಟಿರುವ ಸಮಾಜವನ್ನು ಸುಧಾರಿಸುವ ಕೆಲಸವನ್ನು ಕರ್ನಾಟಕ ಕಲಾ ಸಂಘ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಗೊ.ರು.ಚೆನ್ನಬಸಪ್ಪ ತಿಳಿಸಿದರು.

ರವೀಂದ್ರಕಲಾ ಕ್ಷೇತ್ರದಲ್ಲಿ ಕರ್ನಾಟಕ ಕಲಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಯೋತ್ಪಾದನೆ, ಭ್ರಷ್ಟಾಚಾರ, ವಂಚನೆಗಳಿಂದ ಸಮಾಜ ಹದಗೆಟ್ಟಿದ್ದು, ಇದನ್ನು ಸರಿ ಪಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನಮಗೆ ಮಕ್ಕಳು, ವೃದ್ಧರು, ಅನಾಥರು, ಬಡವರ ಬಗ್ಗೆ ಅನುಕಂಪ. ರೈತರು, ಕ್ರೀಡಾಪಟುಗಳು, ಸಾಧಕರು, ಸಾಹಿತಿಗಳು, ಯೋಧರ ಬಗ್ಗೆ ಅಭಿಮಾನ. ಮಧ್ಯ ವಯಸ್ಕರು, ಶ್ರೀಮಂತರು, ರಾಜಕಾರಣಿಗಳು ಹಾಗೂ ದಲ್ಲಾಳಿಗಳ ಬಗ್ಗೆ ಎಚ್ಚರಿಕೆ ಇರಬೇಕು. ಕಳ್ಳರು, ಸುಳ್ಳರು, ಚಾಡಿಕೋರರು, ವಂಚಕರ ಬಗ್ಗೆ ಕನಿಕರ ಇರಬಾರದು ಎಂದು ತಿಳಿಸಿದರು.

ನಮ್ಮಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದಾರೆ. ಆದರೆ, ಇವರಲ್ಲಿ ಮನುಷ್ಯತ್ವ ಇರುವವರನ್ನು ಹುಡುಕುವಂತಾಗಿದೆ. ಇವನ್ನೆಲ್ಲ ಹೋಗಲಾಡಿಸಬೇಕಾದರೆ ಕೂಡಿ ದುಡಿಯುವ ಕೆಲಸವಾಗಬೇಕು.ಅದಕ್ಕೆ ಕರ್ನಾಟಕ ಕಲಾ ಸಂಘ ಮಾದರಿಯಾಗಿದೆ ಎಂದರು.

ನನಗೆ ಎಸ್‍ಎಎಲ್ ಬಹಳ ಆತ್ಮೀಯವಾಗಿದ್ದು, ಸಂಘವು ಚಿನ್ನದ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಹಿರಿಯ ಕಾರ್ಮಿಕರು, ಸಮಾಜ ಸೇವಕರಿಗೆ, ಹಿರಿಯ ಸಾಹಿತಿಗಳಿಗೆ ಸನ್ಮಾನ ಮಾಡುತ್ತಿದ್ದು, ಇದೊಂದು ಉತ್ತಮ ಸೇವೆ ಎಂದು ಬಣ್ಣಿಸಿದರು.

ನಿರ್ಮಾಪಕ, ನಿರ್ದೇಶಕ ಸುರೇಶ್ ಮಾತನಾಡಿ, ಎಸ್‍ಎಎಲ್ ಸಂಸ್ಥೆಯು ಸುಮಾರು 15ರಿಂದ 16 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದು, ಕನ್ನಡದ ಬಗ್ಗೆ ಶ್ರಮಿಸುವ ಸಂಸ್ಥೆಯಾಗಿದೆ.ಪ್ರತಿಯೊಬ್ಬರ ಮನೆಯಲ್ಲೂ ಕನ್ನಡ ದೀಪ ಹಚ್ಚಬೇಕು ಎಂದರು.

ಕಾರ್ಯಕ್ರಮದಲ್ಲಿ ನಟಿ ಮೇಘನಾರಾಜ್ ಸರ್ಜಾ, ಗಾಯಕಿ ಛಾಯಾ, ಜನಪದ ಗಾಯಕ ಗುರುರಾಜ್ ಹೊಸಕೋಟೆ, ಇಂಜಿನ್ ಮತ್ತು ಐಎಂಜಿಟಿ ವಿಭಾಗದ ವ್ಯವಸ್ಥಾಪಕ ರಾಜಮಣಿ ಸೇರಿದಂತೆ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ