ನಾಳೆಯೇ ಸಂಪುಟ ವಿಸ್ತರಣೆ; ಮಂಗಳವಾರ ನೂತನ ಸಚಿವರ ಪ್ರಮಾಣ

ಬೆಂಗಳೂರು : ಒಂದು ಕಡೆ ಪ್ರವಾಹದಿಂದ ತತ್ತರಿಸಿರುವ ಜನರು, ಮತ್ತೊಂದೆಡೆ ಸಂಪುಟ ರಚನೆ ಕಸರತ್ತು. ಈ ಮಧ್ಯೆ ವಿಪಕ್ಷಗಳ ಟೀಕೆ. ಈ ಎಲ್ಲ ಬೆಳವಣಿಗೆ ನಡುವೆ ರಾಜ್ಯ ಸಂಪುಟ ರಚನೆ ಕಸರತ್ತು ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಚಿವ ಸಂಪುಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

“ಸೋಮವಾರ ಮಧ್ಯಾಹ್ನ ಕ್ಯಾಬಿನೆಟ್​ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಫೈನಲ್ ಆಗಲಿದೆ. ಮಂಗಳವಾರ 3-4 ಗಂಟೆ ಹೊತ್ತಿಗೆ ಸಂಪುಟ ವಿಸ್ತರಣೆ ಆಗಲಿದೆ. ಮೊದಲ ಹಂತದಲ್ಲಿ 13-14 ಸಚಿವರು ಸಂಪುಟ ಸೇರಿಕೊಳ್ಳಲಿದ್ದಾರೆ,” ಎಂದರು ಬಿಎಸ್​ವೈ. ಇನ್ನು ಮಂಗಳವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಯಡಿಯೂರಪ್ಪಗೆ ಮೋದಿ ಬಳಿ ಹಣ ಕೆಳಲು ತಾಕತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ. “ಅಧ್ಯಯನ ತಂಡ ವರದಿ ಕೊಡದೆ ಪರಿಹಾರ ಕೊಡಲು ಸಾಧ್ಯವಿದೆಯೇ? ಸಿದ್ದರಾಮಯ್ಯ ಅದನ್ನು ತಿಳಿದುಕೊಳ್ಳಬೇಕು. ಪರಿಹಾರ ಹಣ ಬಿಡುಗಡೆಯಾದ ಮೇಲೆ ಅವರಿಗೆ ಅರ್ಥ ಆಗಲಿದೆ,” ಎಂದರು ಸಿಎಂ.

ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ನೀಡುವುದು ವಿಳಂಬ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಬಿಎಸ್​ವೈ, “ಈ ಬಗ್ಗೆ ನಾವು ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸ್ತೇನೆ. ತತ್ ಕ್ಷಣ ಸ್ಪಂದಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಜನರು ಧೃತಿಗೆಡುವುದು ಬೇಡ. ಸರ್ಕಾರ ನಿಮ್ಮ ಜೊತೆ ಇದೆ,” ಎಂದು ಆಶ್ವಾಸನೆ ನೀಡಿದರು.
“ನೆರೆ ಹಾನಿ ವಿಚಾರವಾಗಿ ಪ್ರಧಾನಿ ಮತ್ತು ಗೃಹಸಚಿವರ ಜೊತೆ ಸುದೀರ್ಘವಾಗಿ ಚರ್ಚೆ ಆಗಿದೆ. ಇನ್ನೊಂದೆರಡು ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಕ್ಕೆ ಮತ್ತೆ ಭೇಟಿ ಕೊಡುತ್ತೇನೆ. ಮತ್ತೆ ಹೆಲಿಕಾಪ್ಟರ್ ಮೂಲಕ ತೆರಳಿ ವೈಮಾನಿಕ ಸಮೀಕ್ಷೆ ಮಾಡಿಬರುತ್ತೇನೆ,” ಎಂದು ಬಿಎಸ್​ವೈ ತಿಳಿಸಿದರು.

ಸಂಭಾವ್ಯ ಸಚಿವರ ಪಟ್ಟಿ:
1) ಆರ್. ಅಶೋಕ್- ಒಕ್ಕಲಿಗ
2) ಕೆ.ಎಸ್. ಈಶ್ವರಪ್ಪ, ಕುರುಬ
3) ಜೆ.ಸಿ. ಮಾಧುಸ್ವಾಮಿ, ಲಿಂಗಾಯತ
4) ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ
5) ಉಮೇಶ್ ಕತ್ತಿ, ಲಿಂಗಾಯತ
6) ಬಾಲಚಂದ್ರ ಜಾರಕಿಹೊಳಿ, ಎಸ್​ಟಿ
7) ಗೋವಿಂದ ಕಾರಜೋಳ, ದಲಿತ
8) ಬಿ. ಶ್ರೀರಾಮುಲು, ಎಸ್​ಟಿ
9) ಎಸ್. ಅಂಗಾರ, ದಲಿತ
10) ಎಸ್.ಎ. ರಾಮದಾಸ್, ಬ್ರಾಹ್ಮಣ,
11) ಜಿ. ಕರುಣಾಕರ ರೆಡ್ಡಿ, ರೆಡ್ಡಿ
12) ಶಿವನಗೌಡ ನಾಯಕ, ಎಸ್​ಟಿ
13) ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಕೋಟಾ
14) ಡಾ| ಸಿ.ಎನ್. ಅಶ್ವಥ್ ನಾರಾಯಣ, ಒಕ್ಕಲಿಗ
15) ಸುನೀಲ್ ಕುಮಾರ್ ಅಂಗಾರ, ಈಡಿಗ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ