ನವದೆಹಲಿ, ಜು. 29– ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ವ್ಯಾಘ್ರಗಳ ಸಂತತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಇದಕ್ಕೆ ಕಾರಣರಾದ ಎಲ್ಲರನ್ನೂ ಅಭಿನಂದಿಸಿದ್ದಾರೆ.
ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಅಖಿಲ ಭಾರತ ಹುಲಿ ಅಂದಾಜು ವರದಿ-2018 ಬಿಡುಗಡೆ ಮಾಡಿದರು. 2014ರಿಂದ ಈ ವರೆಗೆ ಹುಲಿ ಸಂಖ್ಯೆಯಲ್ಲಿ ಎರಡು ಪಟ್ಟು ವೃದ್ಧಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆ.
2014ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 1,400ರಷ್ಟಿತ್ತು. 2019ರಲ್ಲಿ ಅದು 2,977ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿ ಬಿಡುಗಡೆ ಮಾತನಾಡಿದ ಪ್ರಧಾನಿ ಇದು ಅತ್ಯಂತ ಸ್ವಾಗತಾರ್ಹ ಮತ್ತು ಸಂತೋಷದ ಸಂಗತಿ. ಭಾರತವೂ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಹುಲಿಗಳು ಮತ್ತು ಅವುಗಳ ಸುರಕ್ಷಿತ ತಾಣವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರಧಾನಿ ತಿಳಿಸಿದರು.
ಹುಲಿ ಸಂತತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಎರಡರಷ್ಟು ಹೆಚ್ಚಳ ಕಂಡು ಬಂದಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣರಾದ ವನ್ಯ ಸಂರಕ್ಷಕರು, ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರವಾದಿಗಳು ಮತ್ತು ಸಂಬಂಧಪಟ್ಟ ಎಲ್ಲರನ್ನೂ ನಾನು ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಹೇಳಿದರು.