ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕರಿಗೆ ತೊಂದರೆಯಾದರೆ ಸುಮ್ಮನಿರುವುದಿಲ್ಲ-ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಜು.27-ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರ ಸುರಕ್ಷತೆ ದೃಷ್ಟಿಯಿಂದ ರೌಡಿಗಳ ನಿಯಂತ್ರಣ ಹಾಗೂ ಕಾನೂನು ಬಾಹಿರ ಚಟುಟಿಕೆಗಳನ್ನು ನಡೆಸುವವರ ನಿರ್ಧಾಕ್ಷಿಣ್ಯವಾಗಿ ಹತ್ತಿಕ್ಕಬೇಕೆಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ಕಾನೂನು ಬಾಹಿರ ಚಟುವಟಿಕೆಗ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸಕ್ಕೆ ಬೆಳಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಆಗಮಿಸಿದ ವೇಳೆ ಯಡಿಯೂರಪ್ಪನವರು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸರಗಳ್ಳತನ, ಒಂಟಿ ಮಹಿಳೆಯರ ಮೇಲೆ ಹಲ್ಲೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ರೌಡಿಗಳ ಉಪಟಳ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಕೊಟ್ಟಿದ್ದಾರೆ.

ನಾನು ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನ ಹೆಸರು ಹೇಳಿಕೊಂಡು ಯಾರಾದರೂ ಕಾನೂನು ಬಾಹಿರವಾದ ಚಟುವಟಿಕೆಗಳನ್ನು ನಡೆಸಿದರೆ ನನ್ನ ಪಕ್ಷದವರೇ ಇರಲಿ ಬೇರೆ ಯಾರೇ ಇರಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಕೆಲವು ಪೊಲೀಸ್ ಠಾಣೆಗಳು ಭೂ ವ್ಯಾಜ್ಯ ಪರಿಹರಿಸುವ ಮಧ್ಯವರ್ತಿ ಕೇಂದ್ರಗಳಾಗಿ ಕೆಲಸ ನಿರ್ವಹಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಠಾಣೆಯ ಇನ್‍ಸ್ಪೆಕ್ಟರ್‍ಗಳು ನೇರವಾಗಿ ಭಾಗಿಯಾಗಿರುವುದಕ್ಕೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ನ್ಯಾಯ ಕೇಳಿ ಬಂದವರಿಗೆ ಪೊಲೀಸರು ರಕ್ಷಣೆ ಕೊಟ್ಟು ನ್ಯಾಯ ಒದಗಿಸಬೇಕು. ಮುಂದೆ ಇಂತಹ ದೂರುಗಳು ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಅನಗತ್ಯವಾಗಿ ಪೊಲೀಸರ ಕರ್ತವ್ಯದಲ್ಲಿ ನಾನು ಪ್ರವೇಶಿಸುವುದಿಲ್ಲ. ಹಾಗಂತ ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ. ನಗರದ ಜನತೆಗೆ ರಕ್ಷಣೆ ಕೊಡಬೇಕು. ಎಲ್ಲೆಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೋ ಅದನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ವಲಯ ಡಿಸಿಪಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ಇತ್ತೀಚೆಗೆ ರೌಡಿಗಳ ಉಪಟಳ ವಿಪರೀತವಾಗಿದೆ. ನಮ್ಮನ್ನು ಯಾರು ಏನೂ ಮಾಡಲಾರರು ಎಂದು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಇಂಥವರಿಗೆ ಪೊಲೀಸರು ಕೂಡ ಕುಮ್ಮಕ್ಕು ನೀಡುತ್ತಿದ್ದಾರೆ. ಯಾರೇ ಆಗಲಿ ಇಂಥವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕರಿಗೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಪೊಲೀಸರು ಬಿಗಿಯಾದ ಕ್ರಮವನ್ನು ಕೈಗೊಳ್ಳಬೇಕು. ಆಗಸ್ಟ್ ತಿಂಗಳಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗುವುದು. ನಿಮಗೆ ಮುಕ್ತವಾಗಿ ಕೆಲಸ ಮಾಡಲು ನಮ್ಮಿಂದ ಯಾವುದೇ ರೀತಿಯ ಯಾವುದೇ ಅಡ್ಡಿ ಇಲ್ಲ. ಸ್ವತಂತ್ರವಾಗಿ ಕೆಲಸ ಮಾಡಿ ಇಲಾಖೆಗೆ ಉತ್ತಮ ಹೆಸರು ತಂದುಕೊಡಿ ಎಂದು ಸಲಹೆ ಮಾಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಅಲೋಕ್ ಕುಮಾರ್ ಕಾನೂನು ಸುವ್ಯವಸ್ಥೆ ಕುರಿತಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ