ಜೆಡಿಎಸ್‍ನಿಂದ ಬಾಹ್ಯ ಬೆಂಬಲ-ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು,ಜು.27- ಜೆಡಿಎಸ್‍ನಿಂದ ಬಾಹ್ಯ ಬೆಂಬಲ ನೀಡುವ ಬಗ್ಗೆ ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಬಲ ಪಡೆಯಬೇಕೆ ಬೇಡವೇ ಎಂಬ ಜಿಜ್ಞಾಸೆ ಎದುರಾಗಿದೆ.

ಭವಿಷ್ಯದ ಹಿತದೃಷ್ಟಿಯಿಂದ ಜೆಡಿಎಸ್ ಬಾಹ್ಯ ಬೆಂಬಲ ನೀಡಿದರೆ ವಿರೋಧವೇಕೆ ಎನ್ನುತ್ತಿದ್ದರೆ, ಈಗಾಗಲೇ ಒಂದು ಬಾರಿ ಅವರಿಂದ ಮೋಸ ಹೋಗಿದ್ದೇವೆ. ಪುನಃ ಅದೇ ಪಕ್ಷದ ಬೆಂಬಲ ಪಡೆಯುವುದು ಸರಿಯೇ ಎಂಬ ಪ್ರಶ್ನೆಗಳು ಎದ್ದಿದ್ದು,ಈ ಬಗ್ಗೆ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.

ಚಿಕ್ಕಮಗಳೂರು- ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಜೆಡಿಎಸ್‍ನ ಬಾಹ್ಯ ಬೆಂಬಲದ ಅಗತ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರೆ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಈ ಬಗ್ಗೆ ಪಕ್ಷದ ವಲಯದಲ್ಲಿ ಯಾವುದೇ ರೀತಿ ಚರ್ಚೆ ನಡೆದಿಲ್ಲ. ವರಿಷ್ಠರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಬೆಂಬಲ ಬೇಡ:
ಜೆಡಿಎಸ್ ಬಾಹ್ಯ ಬೆಂಬಲ ನೀಡುವ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನಮಗೆ ಜೆಡಿಎಸ್ ಬಾಹ್ಯ ನೀಡುವ ಅಗತ್ಯವೇ ಇಲ್ಲ. ಸೋಮವಾರ ನಾವೇ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುತ್ತೇವೆ. ಬೇರೆ ಪಕ್ಷಗಳ ಸಹಕಾರ ಅಗತ್ಯವಿಲ್ಲ ಎಂದು ತಿಳಿಸಿದರು.

ನಾವು ಒಂದು ಬಾರಿ ಜೆಡಿಎಸ್‍ನಿಂದ ಮೋಸ ಹೋಗಿದ್ದೇವೆ. ಪುನಃ ಅವರ ಬೆಂಬಲ ಪಡೆದು ಪಕ್ಷದಲ್ಲಿ ಗೊಂದಲ ಸೃಷ್ಟಿಸಿಕೊಳ್ಳುವುದಿಲ್ಲ. ಜೆಡಿಎಸ್‍ನ ಆಂತರಿಕ ವಿಷಯಗಳ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಆದರೆ ಅವರಿಂದ ಬಾಹ್ಯ ಬೆಂಬಲ ಪಡೆಯುವುದಿಲ್ಲ ಎಂದಿದ್ದಾರೆ.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಜೆಡಿಎಸ್ ವರಿಷ್ಠರು ಬಾಹ್ಯ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಒಂದು ವೇಳೆ ಅವರು ನಮಗೆ ಬಾಹ್ಯ ಬೆಂಬಲ ನೀಡಿದರೆ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಸದ್ಯಕ್ಕಂತೂ ಈ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಹೇಳಿದರು.

ಜೆಡಿಎಸ್‍ನಿಂದ ಬೆಂಬಲ ಪಡೆಯಬೇಕೆ ಬೇಡವೇ ಎಂಬುದು ನಮ್ಮಲ್ಲೂ ಕೂಡ ಚರ್ಚೆಯಾಗಿಲ್ಲ. ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬಂದಿರುವ ಶಾಸಕರಿಗೆ ವೈಯಕ್ತಿಕವಾಗಿ ನಾನು ಅಭಿನಂದಿಸುತ್ತೇನೆ ಎಂದರು.

ಒಂದು ವೇಳೆ ಜೆಡಿಎಸ್ ವರಿಷ್ಠರಿಂದ ಅಂತಹ ಪ್ರಸ್ತಾಪ ಬಂದರೆ ಕೇಂದ್ರ ವರಿಷ್ಠರು ತೀರ್ಮಾನಿಸುತ್ತಾರೆ. ನಾವು ವಿಶ್ವಾಸ ಮತವನ್ನು ನೂರಕ್ಕೆ ನೂರರಷ್ಟು ಗೆಲ್ಲಲಿದ್ದೇವೆ. ಬೇರೆ ಯಾವುದೇ ಪಕ್ಷದ ಬೆಂಬಲವಿಲ್ಲದೆ ಬಹುಮತ ಸಾಬೀತು ಮಾಡುತ್ತೇವೆ ಎಂದು ಹೇಳಿದರು.

ಇನ್ನು ಜೆಡಿಎಸ್ ಬೆಂಬಲ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಮೊದಲು ಜೆಡಿಎಸ್‍ನಿಂದ ಅಧಿಕೃತವಾಗಿ ಹೇಳಿಕೆ ಬರಲಿ. ನಂತರ ನಾವು ಯಾವ ತೀರ್ಮಾನ ಮಾಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ