ಬೆಂಗಳೂರು. ಜು. ೨೬ -ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ
ಸಂಜೆ 6.34 ಕ್ಕೆ ನಡೆದ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರು.
ದೇವರು ಹೆಸರಿನಲ್ಲಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ.
ಹಸಿರು ಶಾಲು ಹಾಗೂ ಶ್ವೇತಾಸ್ತ್ರದಾರಿಯಾಗಿದ್ದ ಯಡಿಯೂರಪ್ಪ ಶುಕ್ರವಾರ ಸಂಜೆ ಗೋಧೂಳಿ ಲಗ್ನದಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು ಒಂದು ವಾರದಲ್ಲಿ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸುವಂತೆ ರಾಜ್ಯಪಾಲರು ಅವರಿಗೆ ಸೂಚನೆ ನೀಡಿದ್ದಾರೆ.
ಆದರೆ ಒಂದು ವಾರ ಕಾಯದೆ ಸಾಧ್ಯವಾದಷ್ಟು ಬೇಗ ತಮ್ಮ ಸರ್ಕಾರಕ್ಕಿರುವ ಬಹುಮತವನ್ನುಸಾಬೀತುಪಡಿಸಲು ಯಡಿಯೂರಪ್ಪ ನಿರ್ಧರಿಸಿದ್ದು,ಜುಲೈ ಮೂವತ್ತೊಂದರೊಳಗೆ ಧನವಿನಿಯೋಗ ಮಸೂದೆಗೂ ಅಂಗೀಕಾರ ಪಡೆಯಲಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣವನ್ನು ಗಂಭೀರವಾಗಿ ಗಮನಿಸಿದ ಬಿಜೆಪಿ ಹೈಕಮಾಂಡ್ ಈ ಕುರಿತು ಸ್ಪೀಕರ್ ಅವರು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ನೋಡುತ್ತಿತ್ತು.
ಯಾಕೆಂದರೆ 225 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೆ ಇದ್ದರೆ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವ ವೇಳೆಗೆ ಹೆಚ್ಚು ಕಡಿಮೆ ಆಗಬಹುದು ಎಂಬ ಸಂಶಯ ಅದನ್ನು ಕಾಡುತ್ತಿತ್ತು.
ಒಂದು ವೇಳೆ ಬಹುಮತ ಸಾಬೀತಿನ ವೇಳೆ ಅತೃಪ್ತ ಶಾಸಕರ ಪೈಕಿ ಹಲವರು ಏಕಾಏಕಿಯಾಗಿ ತಮ್ಮ ನಿರ್ಧಾರವನ್ನು ಬದಲಿಸಿದರೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಸ್ವಲ್ಪ ಕಾಲ ಕಾಯುವಂತೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿತ್ತು.
ಆದರೆ ಗುರುವಾರ ರಾತ್ರಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿದ ಶಾಸಕರ ಪೈಕಿ ಆರ್.ಶಂಕರ್,ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮೇಲೆ ಬಿಜೆಪಿ ಹೈಕಮಾಂಡ್ ನಡೆ ಬೇರೆ ಆಯಿತು.
ಹೇಗಿದ್ದರೂ ಅತೃಪ್ತ ಶಾಸಕರು ಬಹುಮತ ಸಾಬೀತಿನ ವೇಳೆ ಗೈರು ಹಾಜರಾಗುವುದರಿಂದ ಸದನದ ಸಂಖ್ಯಾಬಲದ ಮೇಲೆ ಸರ್ಕಾರ ನಿರಾತಂಕವಾಗಿ ತನ್ನ ಉದ್ದೇಶ ಪೂರೈಸಿಕೊಳ್ಳುತ್ತದೆ.
ಹೀಗಾಗಿ ವಿಳಂಬ ಧೋರಣೆ ಅನುಸರಿಸಿದರೆ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗಾಗಬಹುದು.
ಹಾಗಾಗುವುದು ಬೇಡ ಎಂಬ ಕಾರಣಕ್ಕಾಗಿ ಶುಕ್ರವಾರದಂದೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿತು. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರೆದುರು ಯಡಿಯೂರಪ್ಪ ಅವರು ಹಕ್ಕು ಮಂಡಿಸಿದಾಗ ಸಂಜೆ 6:15 ಕ್ಕೆ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚನೆ ನೀಡಿದರು.
ಹೀಗೆ ಗೋಧೂಳಿ ಲಗ್ನದಲ್ಲಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು,ನಾಲ್ಕನೇ ಬಾರಿ ಈ ರೀತಿ ಪ್ರಮಾಣ ವಚನ ಸ್ವೀಕರಿಸಿದ ದಾಖಲೆಗೆ ಪಾತ್ರರಾದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಕ್ಷದ ಹಲ ರಾಷ್ಟ್ರೀಯ ನಾಯಕರಿಂದ ಹಿಡಿದು ರಾಜ್ಯದ ಹಲವು ನಾಯಕರು ಹಾಜರಿದ್ದರಲ್ಲದೆ ಬಿಜೆಪಿ ಮತ್ತೊಮ್ಮೆ ದಕ್ಷಿಣ ಭಾರತದ ಹೆಬ್ಬಾಗಿಲನ್ನು ತೆರೆದ ಘಟನೆಗೆ ಸಾಕ್ಷಿಯಾದರು.
ಅಂದ ಹಾಗೆ 2007 ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಸಕಾಲಕ್ಕೆ ಜೆಡಿಎಸ್ ಬೆಂಬಲ ದೊರೆಯದ ಕಾರಣ ರಾಜೀನಾಮೆ ನೀಡಿದ್ದರು. ಆನಂತರ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಿತ್ತಲ್ಲದೆ 2008 ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು.
ಈ ಚುನಾವಣೆಯಲ್ಲಿ ಗೆದ್ದು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದಾದ ನಂತರ 2018 ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಕಾರಣಕ್ಕಾಗಿ ಅತ್ಯಂತ ದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು.
ಹೀಗೆ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ತೀನ್ ದಿನ್ ಕಾ ಸುಲ್ತಾನ್ ಎಂಬ ಬಿರುದಿನೊಂದಿಗೆ ಅಧಿಕಾರ ಕಳೆದುಕೊಂಡಿದ್ದರು.’ ಇದೀಗ ನಾಲ್ಕನೇ ಬಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಒಂದು ವಾರದೊಳಗೆ ತಮಗಿರುವ ಬಹುಮತವನ್ನು ಸಾಬೀತುಪಡಿಸಬೇಕಿದೆ.