ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ

ಬೆಂಗಳೂರು, ಜು.26- ರಾಜ್ಯದ 29ನೇ ನೂತನ ಮುಖ್ಯಮಂತ್ರಿಯಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಲಿಯಾಸ್ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ನಾಲ್ಕನೇ ಬಾರಿಗೆ ಅಧಿಕಾರ ಸ್ವೀಕರಿಸಿದರು.

ಸಂಜೆ 6ರಿಂದ 6.35ಕ್ಕೆ ಸಲ್ಲುವ ಗೋಧೂಳಿ ಶುಭ ಸಂದರ್ಭದಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ಯಡಿಯೂರಪ್ಪ ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ದಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಇಂದು ಬೆಳಗ್ಗೆ 10 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಮೊದಲು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸುವ ಸಿದ್ಧತೆಯಾಗಿತ್ತು. ರಾಜ್ಯಪಾಲರ ಭೇಟಿ ನಂತರ ಅದು ಸಂಜೆ 6 ಗಂಟೆಗೆ ಬದಲಾವಣೆಯಾಯಿತು.

ಸಂಜೆ ರಾಜಭವನದ ಸುತ್ತೇಲ್ಲಾ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಪ್ರಮಾಣವಚನ ಸ್ವೀಕಾರ ವೀಕ್ಷಣೆಗೆ ಅನುಕೂಲವಾಗುವಂತೆ ರಾಜಭವನದ ಹೊರಗೆ ಎಲ್‍ಇಡಿ ಟಿವಿಗಳನ್ನು ಅಳವಡಿಸಲಾಗಿತ್ತು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ನೂತನ ಮುಖ್ಯಮಂತ್ರಿಗೆ ಅಧಿಕಾರ ಗೌಪ್ಯತೆ ಬೋಧಿಸಿದರು. ಮೊದಲ ಹಂತದಲ್ಲಿ ಯಡಿಯೂರಪ್ಪ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದು, ಬಹುಮತ ಸಾಬೀತು ಪಡಿಸಿದ ನಂತರ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಒಂದು ವಾರದೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಬಿ.ಎಸ್.ಯಡಿಯೂರಪ್ಪನವರಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಹಾಗಾಗಿ ಸೋಮವಾರವೇ ಯಡಿಯೂರಪ್ಪ ವಿಶ್ವಾಸ ಮತ ಸಾಬೀತಿಗೆ ಅಧಿವೇಶನ ಕರೆಯುವ ಸಾಧ್ಯತೆ ಇದೆ.

ಸದ್ಯ ವಿಧಾನಸಭೆಯ ಬಲಾಬಲ 222 ಸಂಖ್ಯೆಯನ್ನು ಹೊಂದಿದೆ. ಮೂವರು ಶಾಸಕರ ಅನರ್ಹತೆಯಿಂದ ಸಂಖ್ಯಾಬಲ ಕುಸಿದಿದೆ. ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್.ನಾಗೇಶ್ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳು 101 ಸಂಖ್ಯೆ ಸದಸ್ಯರನ್ನು ಹೊಂದಿವೆ. ಬಿಎಸ್‍ಪಿಯಿಂದ ಉಚ್ಛಾಟನೆಗೊಂಡ ಎನ್.ಮಹೇಶ್ ತಟಸ್ಥರಾಗಿ ಉಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸ್ಪೀಕರ್ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ಸರ್ಕಾರ ರಚನೆ ಚಟುವಟಿಕೆ ಬಿರುಸುಗೊಂಡವು.
ಹೈಕಮಾಂಡ್ ಒಪ್ಪಿಗೆ:
ಇನ್ನು ಸರ್ಕಾರ ರಚನೆ ಮಾಡುವ ಕುರಿತುಂತೆ ಹೈಕಮಾಂಡ್ ನಾಯಕರು ಈ ಬಾರಿ ಸಾಕಷ್ಟು ಲೆಕ್ಕ ಹಾಕಿಯೇ ಬೆಳಗ್ಗೆ 9.30ಕ್ಕೆ ಹಸಿರು ನಿಶಾನೆ ತೋರಿದ್ದರು.
ನಿನ್ನೆಯಿಂದಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖಂಡರಾದ ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಅರವಿಂದ ಲಿಂಬಾವಳಿ ಮತ್ತಿತರರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟರು.

ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಷಯದಲ್ಲಿ ವಿಳಂಬ ಮಾಡಿದರೆ ಭಿನ್ನಮತೀಯರ ನಿಲುವು ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದನ್ನು ಮನವರಿಕೆ ಮಾಡಿದರು. ಸ್ಪೀಕರ್ ಶಾಸಕರ ರಾಜೀನಾಮೆಯನ್ನು ವಿಳಂಬ ಮಾಡಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಬಳಿಕ ಅಮಿತ್ ಶಾ ಸುಪ್ರೀಂಕೋರ್ಟ್‍ನ ಹಿರಿಯ ವಕೀಲರೊಬ್ಬರಿಂದ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಿದರು. ಸ್ಪೀಕರ್ ಏನೇ ನಿರ್ಧಾರ ಕೈಗೊಂಡರೂ ಅಂತಿಮವಾಗಿ ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಸೋಣ ಎಂದು ವಕೀಲರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಮುದ್ರೆ ಒತ್ತಲಾಯಿತು.

ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಯಾವುದೇ ನಾಯಕರು ಬಿಎಸ್‍ವೈ ಪ್ರಮಾಣವಚನಕ್ಕೆ ಬಾರುವ ಸಾಧ್ಯತೆಗಳಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಹಿಂದೆ 2007ರ ನವೆಂಬರ್ 12ರಿಂದ ನವೆಂಬರ್ 19 ರವರೆಗೆ ಮೊದಲ ಬಾರಿಗೆ ಒಂದು ವಾರ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಆಡಳಿತ ನಡೆಸಿದ್ದರು.

ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದ ವೇಳೆ ವಿಶ್ವಾಸ ಮತ ಸಾಬೀತುಪಡಿಸುವಾಗ ಜೆಡಿಎಸ್ ಬೆಂಬಲ ನೀಡದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.

ರಾಷ್ಟ್ರಪತಿ ಆಳ್ವಿಕೆ ಬಳಿಕ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮತ್ತೆ ಅಧಿಕಾರಕ್ಕೆ ಬಂದಿತು. 2008ರ ಮೇ 30ರಂದು ಯಡಿಯೂರಪ್ಪ ಎರಡನೇ ಬಾರಿಗೆ ರಾಜ್ಯದ 23ನೇ ಮುಖ್ಯಮಂತ್ರಿಯಾದರು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ 2011ರ ಆಗಸ್ಟ್ 3 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮೂರು ವರ್ಷ, ಎರಡು ತಿಂಗಳು ಹಾಗೂ ಮೂರು ದಿನಗಳ ಕಾಲ ಆಡಳಿತ ನಡೆಸಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 2018ರ ಮೇ 17 ರಂದು 3ನೇ ಬಾರಿಗೆ ಹಾಗೂ ರಾಜ್ಯದ 27ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದರು.
2018ರ ಮೇ 19ರಂದು ಮೂರೇ ದಿನಕ್ಕೆ ಯಡಿಯೂರಪ್ಪ ಅವರು ವಿಶ್ವಾಸ ಮತ ಸಾಬೀತುಪಡಿಸಲಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿಶ್ವಾಸ ಮತ ಸಾಬೀತುಪಡಿಸಲಾಗದೆ ಪತನವಾಗಿದ್ದು, ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.

ಪ್ರಮಾಣವಚನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ. ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಮತ್ತು ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಸಂಸದರು, ಕಾಂಗ್ರೇಸ್‍ನಿಂದ ಅಮಾನತುಗೊಂಡಿರುವ ಶಾಸಕ ರೋಷನ್ ಬೇಗ್ಮ, ಕೆ.ಎನ್,ರಾಜಣ್ಣ, ಬಿಜೆಪಿ ರಾಜ್ಯ ಮುಖಂಡರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯ ಬಿಜೆಪಿ ಮತ್ತು ಯಡಿಯೂರಪ್ಪ ಅಭಿಮಾನಿಗಳು ಭಾಗವಹಿಸದ್ದರು.
————————————————————-

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ