ನವದೆಹಲಿ, ಜು.26– ದೇಶದ ಆಟೋಮೊಬೈಲ್ ಮತ್ತು ವಾಹನಗಳ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳ 10ಲಕ್ಷಕ್ಕೂ ಹೆಚ್ಚು ಮಂದಿ ನೌಕರಿ ಕಳೆದುಕೊಳ್ಳುವ ಆತಂಕವಿದೆ ಎಂಬ ವರದಿಗಳ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಆಟೋಮೊಬೈಲ್ ಕ್ಷೇತ್ರದ ಒಂದು ದಶ ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ ಎಂಬ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಈ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಟೋಮೊಬೈಲ್ ಮತ್ತು ಬಿಡಿ ಭಾಗಗಳ ತಯಾರಿಕೆ ಸಂಸ್ಥೆ ಎಸಿಎಂಎ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಲೇಖನಗಳ ಪ್ರತಿಯನ್ನು ತಮ್ಮ ಟ್ವೀಟ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಈ ಉದ್ಯಮದ 10ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಅನೇಕ ಸಂಸ್ಥೆಗಳು ಮುಚ್ಚಲ್ಪಡುತ್ತಿವೆ. ಇಷ್ಟು ಮಂದಿಗೆ ತ್ವರಿತವಾಗಿ ಉದ್ಯೋಗ ಲಭಿಸುವುದು ಕಷ್ಟ. ಅವರು ಅನ್ಯ ಉದ್ಯೋಗ ಕಂಡುಕೊಳ್ಳಲು ಸಮಯ ಬೇಕಾಗುತ್ತದೆ. ಈ ನಡುವೆ ಅವರ ಪರಿಸ್ಥಿತಿ ಶೋಚನೀಯವಾಗುತ್ತದೆ ಎಂದು ಪ್ರಿಯಾಂಕಾ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.