ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ಇಂದು 20 ವರ್ಷ

ನವದೆಹಲಿ, ಜು.26– ಭಾರತದ ಸೇನಾ ಸಾಮಥ್ರ್ಯಕ್ಕೆ ಸಾಕ್ಷಿಯಾದ ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ಇಂದು 20 ವರ್ಷ. ಈ ಸಂದರ್ಭದಲ್ಲಿ ದೇಶಾದ್ಯಂತ ಹುತಾತ್ಮ ಯೋಧರು ಮತ್ತು ಕಾರ್ಗಿಲ್ ವೀರಾಗ್ರಣಿಗಳಿಗೆ ಗೌರವ ಸಮರ್ಪಿಸಲಾಗಿದೆ.

ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು , ಪ್ರಧಾನಮಂತ್ರಿ ನರೇಂದ್ರ ಮೋದಿ , ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗಣ್ಯರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು ಮತ್ತು ಅವರ ತ್ಯಾಗ ಮತ್ತು ಬಲಿದಾನಕ್ಕೆ ಇಡೀ ದೇಶ ಕೃತಜ್ಞರಾಗಿದ್ದೇವೆ. ಭಾರತವನ್ನು ರಕ್ಷಿಸಿದ ಸೈನಿಕ ಶೌರ್ಯಕ್ಕೆ ನಮ್ಮ ಸಲಾಂ ಎಂದು ಗುಣಗಾನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇದೇ ಸಂದರ್ಭದಲ್ಲಿ ಕಾರ್ಗಿಲ್ ಹುತಾತ್ಮರಿಗೆ ನಮನ ಸಲ್ಲಿಸಿ 1999ರಲ್ಲಿ ಕಾರ್ಗಿಲ್ ವೀರ ಯೋಧರೊಂದಿಗೆ ಕಳೆದ ಕೆಲವು ಕ್ಷಣಗಳ ಅಪರೂಪದ ಪೊಟೋಗಳನ್ನು ಸಹ ಟ್ವಿಟ್‍ನಲ್ಲಿಪೋಸ್ಟ್ ಮಾಡಿದ್ದಾರೆ.

ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಮೋದಿ ಅವರು ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸಂಘಟನೆ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಕಾಶ್ಮೀರದ ದ್ರಾಸ್ ವಲಯಕ್ಕೆ ತೆರಳಿದ ಅವರು ಕಾರ್ಗಿಲ್ ಯೋಧರನ್ನು ಭೇಟಿ ಮಾಡಿದರು. ಈ ಅಪರೂಪದ ಪೊಟೋಗಳನ್ನು ಅವರು ಟ್ವಿಟ್‍ನಲ್ಲಿ ಪೋಸ್ಟ್ ಮಾಡಿರುವುದು ಗಮನ ಸೆಳೆದಿದೆ.

ಭಾರತದ ಮೂರು ಸಶಸ್ತ್ರ ಪಡೆಗಳ ಮಹಾ ಮುಖ್ಯಸ್ಥರು ಆದ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಇಂದು ದ್ರಾಸ್ ವಲಯದಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲ್ಲಿಕ್ , ಭಾರತೀಯ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಮತ್ತು ನೌಕಾ ದಳದ ಮುಖ್ಯಸ್ಥ ಅಡ್ಮಿರಲ್ ಕರಂ ವೀರಸಿಂಗ್ ಸೇರಿದಂತೆ ಉನ್ನತ ಸೇನಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ಜು.14ರಂದು ಗೃಹ ಸಚಿವ ರಾಜನಾಥ ಸಿಂಗ್ ಅವರು ರಾಜಧಾನಿ ದೆಹಲಿಯ ಯುದ್ಧ ಸ್ಮಾರಕದಲ್ಲಿ ಬೆಳಗಿದ ಕಾರ್ಗಿಲ್ ಜ್ಯೋತಿ ಇಂದು ದ್ರಾಸ್ ಅನ್ನು ತಲುಪಲಿದ್ದು , ಅಲ್ಲಿ ಜರುಗುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಇತ್ತ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು ಪಾರ್ಲಿಮೆಂಟ್ ಭವನದ ಲೈಬ್ರರಿ ಕಟ್ಟಡದ ಬಳಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಾಜಧಾನಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ರಾಜನಾಥ ಸಿಂಗ್ ಮತ್ತು ಅಮಿತ್ ಶಾ ಕಾರ್ಗಿಲ್ ಹುತಾತ್ಮರಿಗೆ ಗೌರವ ಸಮರ್ಪಿಸಿದರು.
ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ವೀರ ಸೈನಿಕರ ತ್ಯಾಗ ಮತ್ತು ಬಲಿದಾನ ನೆನಪಿಸುವುದರ ಜೊತೆಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ 2 ದಿನ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸ್ಮರಿಸಲಾಗುತ್ತಿದೆ.

ಇಂದು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕಿಸ್ತಾನದ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತಿದೆ. ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜು.26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ