ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾದ ಯಡಿಯೂರಪ್ಪ

ಬೆಂಗಳೂರು, ಜು.25- ಕೇಂದ್ರ ವರಿಷ್ಠರಿಂದ ಸ್ಪಷ್ಟ ಸೂಚನೆ ಬಾರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತುಸು ವಿಚಲಿತರಾದಂತೆ ಕಂಡು ಬಂದರು.

ನಿನ್ನೆ ಇದ್ದಂತಹ ಉತ್ಸಾಹ, ಲವಲವಿಕೆ, ನಗು ಯಾವುದೂ ಕೂಡ ಕಂಡುಬಾರದೆ ಯಡಿಯೂರಪ್ಪ ಆತಂಕಕ್ಕೆ ಒಳಗಾದವರಂತೆ ಕಂಡು ಬಂದರು.
ಇನ್ನು ಡಾಲರ್ಸ್ ಕಾಲೋನಿಯ ಅವರ ನಿವಾಸದಲ್ಲೂ ಕೂಡ ಇಂದು ಯಾವುದೇ ಬಿರುಸಿನ ಚಟುವಟಿಕೆಗಳುಕಂಡು ಬರಲಿಲ್ಲ. ನೀರವ ಮೌನ ಆವರಿಸಿತ್ತು.
ನಿನ್ನೆ ನಾನಾ ಭಾಗಗಳಿಂದ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಹಲವರು ಆಗಮಿಸಿ ಯಡಿಯೂರಪ್ಪನವರಿಗೆ ಹೂ ಗುಚ್ಚ ನೀಡಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖಂಡರಾದ ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ರೇಣುಕಾಚಾರ್ಯ, ಆರ್.ಅಶೋಕ್ ಸೇರಿದಂತೆ ಶಾಸಕರು ಹಾಗೂ ಮುಖಂಡರ ದಂಡೆ ಆಗಮಿಸಿತ್ತು.ಆದರೆ, ಇಂದು ಬೆರಳೆಣಿಕೆಯ ನಾಯಕರು ಹೊರತುಪಡಿಸಿದರೆ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯಲಿಲ್ಲ.

ದೆಹಲಿಗೆ ತೆರಳಿದ್ದ ಜಗದೀಶ್‍ಶೆಟ್ಟರ್ ನೇತೃತ್ವದ ನಿಯೋಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸರ್ಕಾರ ರಚನೆ ಮಾಡಲು ಹಸಿರು ನಿಶಾನೆ ತೋರುತ್ತಾರೆ ಎಂಬುದು ಬಿಜೆಪಿ ಆಸೆಯಾಗಿತ್ತು. ಆದರೆ, ನಿಯೋಗಕ್ಕೆ ಕೆಲವು ಕಾನೂನಾತ್ಮಕ ಸಮಸ್ಯೆಗಳನ್ನು ವಿವರಿಸಿ ಸರ್ಕಾರ ರಚನೆ ಮಾಡುವ ವಿಷಯದಲ್ಲಿ ಆತುರ ಪಡದಂತೆ ಎಚ್ಚರಿಕೆ ಹೆಜ್ಜೆ ಇಡಬೇಕೆಂಬ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಬಿಎಸ್‍ವೈ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಮಾಧ್ಯಮಗಳ ಮುಂದೆ ಬಹಿರಂಗವಾಗಿ ತೋರ್ಪಡಿಸದೆ ಸುರಕ್ಷಿತ ಅಂತರ ಕಾಪಾಡಿಕೊಂಡರು. ಇಂದು ಅವರ ನಿವಾಸಕ್ಕೆ ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್, ಪಿ.ರಾಜು, ಸಿದ್ದು ಸವದಿ, ಪ್ರಭು ಚವ್ಹಾಣ್ ಸೇರಿದಂತೆ ಒಂದಿಷ್ಟು ಶಾಸಕರು ಆಗಮಿಸಿದ್ದರಾದರೂ ನಿನ್ನೆಯಷ್ಟು ಬಿರುಸಿನ ಚಟುವಟಿಕೆಗಳು ಕಂಡು ಬರಲಿಲ್ಲ.

ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಅವರ ಬೆಂಬಲಿಗರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದರು. ನಾಳೆ ಸರ್ಕಾರ ರಚನೆ ಮಾಡಲು ವರಿಷ್ಠರಿಂದ ಶುಭ ಸುದ್ದಿ ಬರಲಿದೆ ಎಂಬುದು ಬಿಎಸ್‍ವೈ ಬೆಂಬಲಿಗರ ನಿರೀಕ್ಷೆಯಾಗಿತ್ತು.
ಆದರೆ, ಸ್ಪೀಕರ್ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣ ಇತ್ಯರ್ಥವಾಗಿ ಅಂತಿಮ ನಿರ್ಧಾರ ಪ್ರಕಟಿಸುವವರೆಗೂ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಹೈಕಮಾಂಡ್ ಸೂಚಿಸಿರುವ ಕಾರಣ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ